ನಗರೀಕರಣದಲ್ಲಿ ಸ್ಲಂಗಳ ವಾತಾವರಣ ಬದಲಾಗಬೇಕು ಸರ್ಕಾರ ಸ್ಲಂ ಜನರಿಗೆ ಭೂ ಒಡೆತನ ನೀಡುತ್ತಿದೆ – ಡಾ.ಜಿ ಪರಮೇಶ್ವರ್
ಇಂದು ತುಮಕೂರು ಮಹಾನಗರ ಪಾಲಿಕೆಯಿಂದ ಸ್ಲಂ ಜನರಿಗೆ ಇ-ಸ್ವತ್ತು ವಿತರಣೆ ಹಾಗೂ ವಿವಿಧ ಸ್ಲಂಗಳ ಜನರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಯಿತು.

ತುಮಕೂರಿನ ಘೋಷಿತ 32 ಸ್ಲಂಗಳಲ್ಲಿ ಹಕ್ಕುಪತ್ರಗಳಿಲ್ಲದ 3643 ಕುಟುಂಬಗಳ ಸಮೀಕ್ಷೆ ಮಾಡಿ ಅರ್ಹತೆಯಿರುವ 1493 ಕುಟುಂಬಗಳಲ್ಲಿ ನೈಜತೆಯಿರುವ 120 ಕುಟುಂಬಗಳಿಗೆ ಹಕ್ಕುಪತ್ರ ನೊಂದಣಿ ಕರಾರಿನ ಜೊತೆಗೆ ನಗರಪಾಲಿಕೆಯಿಂದ 53 ಇ-ಸ್ವತ್ತು ನೀಡಲಾಗಿದೆ. ಇದಕ್ಕೆ ಅಧಿಕೃತವಾಗಿ ಇಂದು ಜಿಲ್ಲಾಡಳಿತದಿಂದ ಚಾಲನೆ ನೀಡಲಾಯಿತು. ಹಕ್ಕುಪತ್ರ ಮತ್ತು ಇ ಖಾತಾವನ್ನು ವಿತರಿಸಿ ಮಾತನಾಡಿದ ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ನಾಗರೀಕ ಸಮಾಜದಲ್ಲಿ ಸ್ಲಂಗಳಿರುವುದು ನಮ್ಮ ಅಸಮಾನತೆಯ ಸೂಚಕವಾಗಿದೆ ಬಹುದಿನಗಳ ಜನರ ಕನಸ್ಸನ್ನು ಈಡೇರಿಸಿದ ತೃಪ್ತಿ ಸಿಕ್ಕಿದೆ, ಈ ನಗರೀಕರಣದಲ್ಲಿ ಸ್ಲಂಗಳ ವಾತಾವರಣ ಬದಲಾಗಿ ಘನತೆಯ ಬದುಕನ್ನು ಕಟ್ಟಿಕೊಳ್ಳಬೇಕು ಕೊಳಚೆ ಪ್ರದೇಶಗಳಲ್ಲೇ ಕಟ್ಟಕಡೆಯದಾಗಿ ಜೀವಿಸುವ ಪೌರಕಾರ್ಮಿಕರ ಬದುಕು ಸಹ ಬದಲಾಗಬೇಕು. ಗ್ರೇಟರ್ ಬೆಂಗಳೂರಿನಲ್ಲಿ ಮನುಷ್ಯನ ವಾಸಕ್ಕೆ ಯೋಗ್ಯವಲ್ಲದ ವಾತಾವರಣದಲ್ಲಿ ಸ್ಲಂಗಳ ಚಿಕ್ಕ ಮನೆಗಳಲ್ಲಿ 8 ರಿಂದ 10 ಜನ ಬದುಕುತ್ತಿರುವುದರಿಂದ ಆ ಪ್ರಮಾಣಕ್ಕೆ ಸರ್ಕಾರ ಸೌಲಭ್ಯಗಳನ್ನು ಕೊಡಬೇಕಿದೆ. ಗ್ರೇಟರ್ ತುಮಕೂರು ಮಾಡಲು ಸಹಾ ನಾವು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆ ಅಡಿ ತುಮಕೂರು ನಗರವನ್ನು ಅಭಿವೃದ್ಧಿ ಮಾಡಿದ್ದೇವೆ. ನಗರಗಳ ಮೇಲೆ ಜನರು ಅವಲಂಬಿತರಾಗಿ ಹೆಚ್ಚೆಚ್ಚು ವಲಸೆ ಬರುತ್ತಿರುವುದರಿಂದ ನಗರದಲ್ಲಿ 40 ರಷ್ಟು ಜನರು ವಾಸ ಮಾಡುತ್ತಿದ್ದು ಇದರಲ್ಲಿ ಕನಿಷ್ಠ 20 ರಷ್ಟು ಜನಸಂಖ್ಯೆ ಸ್ಲಂ ಪ್ರದೇಶಗಳಲ್ಲಿದೆ, ಸ್ಲಂ ಚಿತ್ರಣವನ್ನು ಬದಲಾಯಿಸಲು ಸರ್ಕಾರ ಬದ್ಧವಾಗಿದ್ದು ಇದಕ್ಕಾಗಿ ಈಗಾಗಲೇ 2023ರ ಪ್ರಣಾಳಿಕೆಯಲ್ಲಿ ಹಲವಾರು ಘೋಷಣೆಗಳನ್ನು ಮಾಡಿದ್ದು ಸ್ಲಂ ಜನರಿಗೆ ವಸತಿ ಮತ್ತು ಭೂ ಒಡೆತನ ನೀಡಿ ಸಂವಿಧಾನದ ಘನತೆಯ ಬದುಕನ್ನು ಇಲ್ಲಿರುವ ಜನರಿಗೆ ಖಾತ್ರಿ ಮಾಡಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಎಂದರು.
ಇಂದು ಬಡವರ ಮುಖದಲ್ಲಿ ನಗು ಕಾಣುತ್ತಿರುವುದು ಅವರಿಗೆ ಒಂದು ಶಾಶ್ವತ ಸೂರು ಮತ್ತು ಭೂಮಿ ತಮ್ಮದಾಗಿರುವ ಖುಷಿ ಇದೆ ಇದನ್ನೇ ಸಂವಿಧಾನದಿಂದ ಬದಲಾವಣೆ ಬರಲು ಸಾಧ್ಯವಾಗಿದೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸ್ಸು ಈಡೇರಿಸಿದಂತಾಗಿದೆ ಎಂದರು.

ವೇಧಿಕೆಯಲ್ಲಿ ತುಮಕೂರು ನಗರ ಶಾಸಕರಾದ ಜಿ.ಬಿ ಜ್ಯೋತಿಗಣೇಶ್, ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಬಿಎಂಟಿಸಿ ಉಪಾಧ್ಯಕ್ಷರಾದ ನಿಖಿತ್ ರಾಜ್ ಮೌರ್ಯ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್, ನಗರಪಾಲಿಕೆ ಆಯುಕ್ತರಾದ ಯೋಗಾನಂದ್, ಸ್ಲಂ ಬೋರ್ಡ್ ಎಇಇ ಬಾನುಪ್ರತಾಪ್ ಸಿಂಹ, ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ , ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಉಪಸ್ಥಿತರಿದ್ದರು



