ಒಳಮೀಸಲಾತಿ ಜಾರಿಗೆ ಮಾದಿಗ ಮುಖಂಡರ ಆಗ್ರಹಸರ್ಕಾರದ ವಿಳಂಬ ಧೋರಣೆ ಖಂಡಿಸಿ ಆ.1ರಂದು ಪ್ರತಿಭಟನೆತುಮಕೂರು: ತಕ್ಷಣವೇ ಆಯೋಗದ ವರದಿ ಪಡೆದು ಬರುವ ಆಗಸ್ಟ್ 15ರೊಳಗೆ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಆಗಸ್ಟ್ 15ರಿಂದ ಸರ್ಕಾರದ ವಿರುದ್ಧ ಅಸಹಕಾರ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಮಾದಿಗ ಸಮುದಾಯದ ಮುಖಂಡರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವುದು ಪರಿಶಿಷ್ಟ ಜಾತಿಯವರಲ್ಲಿ ಆತಂಕ ಸೃಷ್ಟಿಯಾಗಿದೆ. ಸರ್ಕಾರ ಕೂಡಲೇ ನಾಗಮೋಹನ್ ದಾಸ್ ವರದಿ ಪಡೆದು ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಆಗಸ್ಟ್ 1ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುತ್ತದೆ. ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಂದು ಮಾದಿಗ ಸಮುದಾಯದ ಸಾವಿರಾರು ಜನ ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.



