ನಮ್ಮದೇ ಶ್ರೇಷ್ಠ ಎಂಬ ವಾದದ ಮೂಲಕ ಇತರೆಯವರನ್ನು ಹೊರ ಹಾಕುವ ಮನುವಾದದ ವಿರುದ್ದ ಅತ್ಯಂತ ಸಂಘಟಿತವಾಗಿ ನಡೆದ ಹೋರಾಟವೇ ಎಲ್ಲರನ್ನು ಒಳಗೊಳ್ಳುವ ಶರಣಚಳವಳಿ,ಅದು ಕಲ್ಯಾಣದ ಕ್ರಾಂತಿಯಲ್ಲ, ಪರಿವರ್ತನೆಯ ಚಳವಳಿ ಎಂದು ಹಿರಿಯ ಸಾಹಿತಿ ಮತ್ತು ಬಸವತತ್ವದ ಪ್ರತಿಪಾದಕರಾದ ರಂಜಾನ್ ದರ್ಗಾ ತಿಳಿಸಿದ್ದಾರೆ.ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತುಮಕೂರು ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣ:ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಇಡೀ ಪ್ರಪಂಚದ ಮೊಟ್ಟ ಮೊದಲ ಒಳ್ಳಗೊಳ್ಳುವ ಸಂಸ್ಕೃತಿ ಎಂದರೆ ಅದು ಬಸವ ಸಂಸ್ಕೃತಿ. ಹಾಗಾಗಿಯೇ ಬಸವಣ್ಣನನ್ನು ಸಾಂಸ್ಕೃತಿಕ ನಾಯಕನೆಂದು ಕರೆಯಲಾಗುತ್ತದೆ ಎಂದರು.ಬಸವ ಸಂಸ್ಕೃತಿ ಅಥವಾ ಶರಣ ಚಳವಳಿ ಎಂಬುದು ವೈದಿಕರ ವಿರುದ್ದ ಅವೈದಿಕರು,ವರ್ಣ ಭೇಧ,ವರ್ಗ ಭೇಧ, ಲಿಂಗಭೇಧವನ್ನು ದಿಕ್ಕರಿಸಿ ನಡೆಸಿದ ಸಂಘಟಿತ ಹೋರಾಟವಾಗಿದೆ.ಹಾಗಾಗಿಯೇ ಲೋಕಾಯುತರನ್ನ,ಚಾರ್ವಕರನ್ನು ಕೊಂದ ವೈದಿಕರೇ ಬಸವಣ್ಣ ಮತ್ತು ಆತನ ಅನುಯಾಯಿಗಳನ್ನು ಕಲ್ಯಾಣ ಕ್ರಾಂತಿಯ ಹೆಸರಿನಲ್ಲಿ ನಡೆಸಿದ ನರಮೇಧ. ಬಸವಣ್ಣ ಹಾಗೂ ಅವರ ಅನುಯಾಯಿಗಳನ್ನು ಕೊಲ್ಲುವ ಜೊತೆಗೆ, ಶರಣ ಸಾಹಿತ್ಯವನ್ನು ಸುಟ್ಟರು. ಇಂದು ನಾವು ಓದುತ್ತಿರುವುದು ತಿರುಚಲ್ಪಟ್ಟ ಶರಣ ಸಾಹಿತ್ಯ.ನಮಗೆ ಲಭ್ಯವಿರುವುದು ಶೇ10ರಷ್ಟು ಶರಣ ಸಾಹಿತ್ಯ ಮಾತ್ರ ಎಂದು ರಂಜಾನ್ ದರ್ಗಾ ನುಡಿದರು.