ರೈತರಿಗೆ ನಾಟಿ ಗೋವು ವಿತರಿಸಿ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯ
ತುಮಕೂರು: ನಾಡಿಗೆ ಅನ್ನ ನೀಡುವ ರೈತನ ಬದುಕು ತುಂಬಾ ಪವಿತ್ರವಾದದ್ದು, ಆದರೆ ಇಂತಹ ರೈತನ ಬದುಕು ಸಂಕಷ್ಟದಲ್ಲಿದೆ. ಯಾವುದೇ ನೀರಿಗಿಂಥಾ ರೈತನ ಬೆವರಿನ ನೀರು ಅತ್ಯಂತ ಶ್ರೇಷ್ಠ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಬಿಜೆಪಿ ರೈತ ಮೋರ್ಚಾ ಹಾಗೂ ಸುಭಾಷ್ ಪಾಳೆಕರ್ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಆಂದೋಲನ ವೇದಿಕೆ ಆಶ್ರಯದಲ್ಲಿ ಏರ್ಪಾಟಾಗಿದ್ದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರ ಹಾಗೂ ರೈತರಿಗೆ ೧೦೧ ನಾಟಿ ಗೋವುಗಳ ವಿತರಣೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಗೋ ಪೂಜೆ ನೆರವೇರಿಸಿ ಮಾತನಾಡಿದರು.

ರೈತ ದೇಶದ ಬೆನ್ನೆಲುಬು, ಕೃಷಿ ಕಾಯಕದ ರೈತನಿಲ್ಲದೆ ನಮಗೆ ಬದುಕೇ ಇಲ್ಲ. ಆದರೆ ರೈತನ ಬದುಕು ಕಷ್ಟಕರವಾದದ್ದು. ಕೃಷಿ ಮಾಡುವ ರೈತ ಹಾಗೂ ದೇಶ ಕಾಯುವ ಯೋಧನ ಕಾರ್ಯ ಅತ್ಯಂತ ಕಠಿಣವಾದದ್ದು, ಈ ಇಬ್ಬರಿಗೂ ನಾವು ಗೌರವ ನೀಡಿ ಅವರ ಕಾರ್ಯ ಸ್ಮರಿಸಬೇಕು ಎಂದರು.
ಇAದು ಕೃಷಿ ಪದ್ಧತಿಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಸಾಂಪ್ರದಾಯಿಕ ಕೃಷಿ ಪದ್ದತಿ ಮರೆಯಾಗುತ್ತಿದೆ. ವಿಶೇಷವಾಗಿ ಗೋವುಗಳ ಸಗಣಿ, ಗಂಜಲವನ್ನು ಗೊಬ್ಬರವಾಗಿ ಬಳಸುವ ಕೃಷಿ ಕಮ್ಮಿಯಾಗಿದೆ. ನಟಿ ಗೋವುಗಳ ಸಾಕಾಣಿಕೆ ಕಡಿಮೆಯಾಗಿ ಸಾವಯವ ಗೊಬ್ಬರ ಸಿಗದೆ ರೈತರು ರಸಾಯನಿಕ ಗೊಬ್ಬರವನ್ನು ಭೂಮಿಗೆ ಹಾಕಿ ಮಣ್ಣಿನ ಆರೋಗ್ಯ ಹಾಳುಮಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಆರೋಗ್ಯಕರ ಆಹಾರ ಪದಾರ್ಥ ಬೆಳೆಯಲಾಗುವುದಿಲ್ಲ, ಅಂತಹ ಅಹಾರ ಸೇವನೆಯಿಂದ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದ ರೈತರು ನಾಟಿ ಗೋವುಗಳ ಸಾಕಣಿಕೆ ಮಾಡಿ, ಅವುಗಳ ಗೊಬ್ಬರ ಬಳಸಿ ವ್ಯವಸಾಯ ಮಾಡುವ ಪದ್ದತಿ ಮತ್ತೆ ಅಳವಡಿಸಿಕೊಳ್ಳಬೇಕು, ಈ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಸಿದ್ಧಲಿಂಗ ಸ್ವಾಮೀಜಿ ಸಲಹೆ ಮಾಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಈಗಿನ ಹಳ್ಳಿ ವ್ಯವಸ್ಥೆ ಹಾಗೂ ಕೃಷಿ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಳ್ಳಿಗಳಲ್ಲಿ ಮೊದಲಿದ್ದ ಪರಸ್ಪರ ಸೌಹಾರ್ದತೆ ಈಗಿಲ್ಲ. ಕೃಷಿ ಲಾಭದಯಕ ಅಲ್ಲವೆಂದು ಕೃಷಿಯನ್ನು ನಿರ್ಲಕ್ಷಿಸುವ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ. ರೈತರಲ್ಲಿ ಅತ್ಮವಿಶ್ವಾಸ ತುಂಬಿ, ಕೃಷಿ ಲಾಭವಾಗುವಂತೆ ಮಾಡಲು ಶೂನ್ಯ ಬಂಡವಾಳದ ನೈಸರ್ಗಿಕ ಪದ್ಧತಿ ಬಳಸಲು ತಿಳಿಸಿದರು.