ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಸ್ಲಂ. ಜನಾಂದೋಲನದಿಂದ ಬೆಳಗಾವಿಯಲ್ಲಿ ಸ್ಲಂ ಜನರಿಂದ ಪ್ರತಿಭಟನಾ ಸಭೆ. ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆಯಿಂದ ಇಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯ ಸರ್ಕಾರದ ಸ್ಲಂ ನಿವಾಸಿಗಳ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನಾ ಸಭೆಯನ್ನು ಚಳಿಗಾಲದ ಅಧಿವೇಶನದ ಭಾಗವಾಗಿ ಹಮ್ಮಿಕೊಂಡು ಸುವರ್ಣ ಸೌಧದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಅವರಿಗೆ ಘೇರಾವ್ ಹಾಕಿ ಮನವಿ ಸಲ್ಲಿಸಿದ ನಂತರ 5 ಘೋಷಣೆಗಳನ್ನು ಪ್ರತಿಭಟನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ನಗರ ಪ್ರದೇಶದ ಕೊಳಗೇರಿಗಳಲ್ಲಿ ಪರಿಶಿಷ್ಟ ಜಾತಿ/ಪಂಗಡ,

ಅಲ್ಪಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳು ಹಾಗೂ ಅಲೆಮಾರಿ, ವಿಶೇಷ ವರ್ಗಗಳು ವಾಸಿಸುವ ಸ್ಲಂಗಳಲ್ಲಿ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಯನ್ನು ಈ ಸರ್ಕಾರ ಪರಿಹರಿಸದೆ ಸ್ಲಂಗಳನ್ನು ಸಾಮಾಜಿಕ ಕಳಂಕವಾಗಿ ನೋಡುತ್ತಿರುವುದು ವಿರ್ಪಯಾಸವಾಗಿದೆ, 2023ರ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ನೀಡಿರುವ ಭರವಸೆಗಳನ್ನು ಇದುವರೆಗೂ ಈಡೇರಿಸಲಿಲ್ಲ. ಸ್ಲಂ ಜನರಿಗೆ ಭೂಮಿ ಮತ್ತು ವಸತಿ ಖಾತ್ರಿಯನ್ನು ನೀಡದೆ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ನಿರ್ಲಕ್ಷಿಸಿಲಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ 2026-2027ನೇ ಸಾಲಿನ ಬಜೆಟ್ನಲ್ಲಿ ಸ್ಲಂ ನಿವಾಸಿಗಳ ಜನ ಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿಡಲು ಒನ್ ಟೈಮ್ ಗ್ರ್ಯಾಂಟ್ ಅನ್ನು ನೀಡಿ ಕೊಳಚೆ ಪ್ರದೇಶಗಳ ಮೂಲ ಸೌಕರ್ಯಕ್ಕೆ ಮುಂದಾಗಬೇಕು ಮತ್ತು ಖಾಸಗೀ ಕೊಳಚೆ ಪ್ರದೇಶಗಳ ಸ್ವಾಧೀನಕ್ಕೆ ಅನುದಾನ ನೀಡಬೇಕೆಂದು ಒತ್ತಾಯಿಸಿದರು.ನಂತರ ಬೆಳಗಾವಿಯ ಚಳಿಗಾಲದ ಅಧಿವೇಶನದ ಪ್ರತಿಭಟನಾ ಸಭೆಯ ನಿರ್ಣಯಗಳನ್ನು ಕಿತ್ತೂರು ವಿಭಾಗದ ಸಂಚಾಲಕರಾದ ಇಮ್ತಿಯಾಜ್.ಆರ್.ಮಾನ್ವಿ ಮಂಡಿಸಿದರು. ಅದರಂತೆ ರಾಜ್ಯ ಸರ್ಕಾರದ ಸ್ಲಂ ಜನರ ನಿರ್ಲಕ್ಷ್ಯ ಧೋರಣೆ ಖಂಡಿಸಿ ರಾಜ್ಯಾದ್ಯಂತ ಜನಾಂದೋಲನ ಕಟ್ಟುವುದು. ಹಾಗೂ 1. 2023ರ ಪ್ರಾಳಿಕೆ ಭರವಸೆಯಂತೆ ಸ್ಲಂ ಜನರಿಗೆ ಉಚಿತವಾಗಿ ಭೂಮಿ ಮತ್ತು ವಸತಿಯನ್ನು ಖಾತ್ರಿಗೊಳಿಸಬೇಕು. 2.ವಸತಿ ಇಲಾಖೆಯಿಂದ ಹೊರಡಿಸಿರುವ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳ ಘೋಷಣೆಗೆ ತಡೆಯಾಗಿರುವ ಸುತ್ತೋಲೆಯನ್ನು ತಕ್ಷಣ ವಾಪಾಸ್ ಪಡೆಯಬೇಕು. 3. 2026-2027ನೇ ಸಾಲಿನ ಬಜೆಟ್ನಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಸರ್ಕಾರ ಹಣವನ್ನು ಮೀಸಲಿಡಬೇಕು. 4. ನಿವೇಶನ ರಹಿತರಿಗೆ ವಸತಿ ಕಲ್ಪಿಸಲು ನಗರ ಪ್ರದೇಶದಲ್ಲಿ ಲ್ಯಾಂಡ್ ಬ್ಯಾಂಕ್ ಯೋಜನೆ ಜಾರಿಗೊಳಿಸಬೇಕು. 5. ರಾಜ್ಯದಲ್ಲಿ ವಸತಿ ಹಕ್ಕು ಜಾರಿಯಾಗಬೇಕು, ಹಾಗೂ ಬಡಜನರಿಗೆ ವಸತಿ ಕಲ್ಪಿಸುವ ಸಮರ್ಥ ವಸತಿ ಸಚಿವರನ್ನು ನೇಮಿಸಲು ನಿರ್ಣಯ ಕೈಗೊಳ್ಳಲಾಯಿತು.ಈ ಸಂದರ್ಭದಲ್ಲಿ ಸಾವಿತ್ರಿ ಬಾಯಿ ಮಹಿಳಾ ಮಹಿಳಾ ಸಂಘಟನೆಯ ಚಂದ್ರಮ್ಮ, ಸ್ಲಂ ಜನಾಂದೋಲನದ ಕಿತ್ತೂರು ವಿಭಾಗ ಸಂಚಾಲರಾದ ಇಮ್ತಿಯಾಜ್ ಆರ್ ಮಾನ್ವಿ, ಕಲ್ಯಾಣ ಕರ್ನಾಟಕ ವಿಭಾಗದ ಸಂಚಾಲಕರಾದ ಜನಾರ್ಧನ್ ಹಳ್ಳಿಬೆಂಚಿ, ಬೆಳಗಾವಿ ಸಂಚಾಲಕರಾದ ಫಕೀರಪ್ಪ ತಳವಾರ್, ಗೋಪಿಬಳ್ಳಾರಿ, ಹುಬ್ಬಳ್ಳಿ ಸಂಚಾಲಕರಾದ ಶೋಭ ಕಮತಾರ್ ಮತ್ತು ಹೊಂಗ್ಯಮ್ಮ, ವಿಜಯಪುರ ಸಂಚಾಲಕರಾದ ಅಕ್ರಮ್ ಮಾಶಾಳ್ಕರ್, ಕಲ್ಬುರ್ಗಿ ಸಂಚಾಲಕರಾದ ರೇಣುಕ ಸರಡಗಿ, ಬಳ್ಳಾರಿ ಸಂಚಾಲಕರಾದ ಶೇಖರ್ ಬಾಬು, ತುಮಕೂರು ಸಂಚಾಲಕರಾದ ಅರುಣ್, ಬೆಂಗಳೂರು ಜಿಲ್ಲಾ ಸಮಿತಿಯ ಮಂಜುಬಾಯಿ ಮತ್ತು ಹಣಮಂತ ಕಟ್ಟಿಮನಿ, ಚಿತ್ರದುರ್ಗ ಸಂಚಾಲಕರಾದ ಸುಧಾ, ದಾವಣಗೆರೆ ಸಂಚಾಲಕರಾದ ರೇಣುಕ ಎಲ್ಲಮ್ಮ ಮತ್ತು ಹೊಸಪೇಟೆ ಸಂಚಾಲಕರಾದ ವೆಂಕಮ್ಮ ನಿಯೋಗದಲ್ಲಿದ್ದರು, ನೂರಾರು ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದರು.



