ತುಮಕೂರು.ಜು.22:ಮಹಾನಗರ ಪಾಲಿಕೆಯಲ್ಲಿ ಬಿ-ಖಾತೆ ಮತ್ತು ಇ-ಖಾತೆ ನಡುವಿನ ಗೊಂದಲ ಬಗೆಹರಿಸಬೇಕು, ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕಬೇಕು, ಯುಜಿಡಿ ಸಮಸ್ಯೆಗೆ ಪರಿಹಾರ ಮತ್ತು ಪಾಕ೯ ಹಾಗೂ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಕುರಿತಂತೆ ಹಾಲಪ್ಪ ಪೌಂಡೇಷನ್ ಅಧ್ಯಕ್ಷ ಮುರುಳೀಧರ ಹಾಲಪ್ಪ ನಾಗರಿಕರೊಂದಿಗೆ ಪಾಲಿಕೆ ಆಯುಕ್ತರನ್ನು ಬೇಟಿ ಮಾಡಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.ನಗರಪಾಲಿಕೆಯ ಆಯುಕ್ತರಾದ ಶ್ರೀಮತಿ ಅಶ್ವಿಜ IAS ಅವರಿಗೆ, ಮನವಿ ಸಲ್ಲಿಸಿದ ಅವರು, ತುಮಕೂರು ನಗರದ ಆಸ್ತಿಗಳ ( ಬಿ ಖಾತೆ ಮತ್ತು ಇ ಖಾತೆ ) ನಡುವಣ ಸಾಕಷ್ಟು ಗೊಂದಲ ಏರ್ಪಟ್ಟಿದೆ. ಸರಕಾರವೇ ಇ ಖಾತೆಗೆ ನಾಲ್ಕು ದಾಖಲೆಗಳು ಸಾಕು ಎಂದು ಜಾಹಿರಾತು ನೀಡಿದ್ದರೂ, ಪಾಲಿಕೆಯ ಕಂದಾಯ ಅಧಿಕಾರಿಗಳು ಸುಮಾರು 11 ದಾಖಲೆಗಳನ್ನು ಕೇಳುತ್ತಿದ್ದಾರೆ. ಅವಶ್ಯಕತೆ ಇಲ್ಲದಿದ್ದರೂ ಇ.ಸಿ., ಎಂ.ಆರ್ ತರುವಂತೆ ಒತ್ತಡ ಹಾಕುತ್ತಿದ್ದಾರೆ. ಒಂದು ಇ.ಸಿ. ತೆಗೆಯಲು 1200 ರೂಗಳಿಂದ 1500 ರೂಗಳನ್ನು ಖರ್ಚು ಮಾಡಬೇಕಾಗಿದೆ. ಇದು ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗಿದೆ. ಹಾಗಾಗಿ ಈ ಖಾತೆ ನೀಡಲು ಅಗತ್ಯವಿರುವ ದಾಖಲೆಗಳ ಸರಳೀಕರಣಗೊಳಿಸುವಂತೆ

ಒತ್ತಾಯಿಸಿದರು.ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ನಗರದ ಹಲವು ಭಾಗಗಳಲ್ಲಿ ಅದರಲ್ಲಿಯೂ ಕುರಿಪಾಳ್ಯ, ಪೂರ್ಹೌಸ್ ಕಾಲೋನಿ ಸೇರಿದಂತೆ ಅತಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ನಾಯಿಗಳು ಮಹಿಳೆಯರು ಮಕ್ಕಳ ಮೇಲೆ ಎರಗುತಿದ್ದು ,ನಗರದಲ್ಲಿರುವ ನಾಯಿಗಳಿಗೆ ಸಂತಾನ ಹರಣ ಶಾಸ್ತ್ರ ಚಿಕಿತ್ಸೆ ಮಾಡಿಸಿ,ಅವುಗಳ ಸಂತತಿ ಬೆಳೆಯದಂತೆ ಮಾಡಬೇಕು. ಹಾಗೆಯೇ ನಗರದಲ್ಲಿ ಹಳೆಯ ಬಡಾವಣೆಗಳಲ್ಲಿ, ಅಲ್ಲದೆ ಹೊರವಲಯದ ಬಡಾವಣೆಗಳಲ್ಲಿ ಯುಜಿಡಿ ಸಮಸ್ಯೆಯಿದ್ದು ಜನರು ಸಾಕಷ್ಟು ತೊಂದರೆ ಅನುಭವಿಸುತಿದ್ದಾರೆ. ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿಲ್ಲ. ಕೆಲವು ಕಡೆಗಳಲ್ಲಿ ಹೇಮಾವತಿ ನೀರು ಲಭ್ಯವಿಲ್ಲದೆ, ಕೊಳವೆ ಬಾವಿ ನೀರೇ ಗತಿಯಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಆಡಳಿತ ಗಮನಹರಿಸಬೇಕೆಂದರು. ಹಾಲಪ್ಪ ಪೌಂಡೇಷನ್ನ ಮುರುಳೀಧರ ಹಾಲಪ್ಪ ಅವರ ಮನವಿಗೆ ಸ್ಪಂದಿಸಿ ಮಾತನಾಡಿದ ಆಯುಕ್ತರಾದ ಅಶ್ವಿಜ IAS ಅವರು,ತುಮಕೂರು ಪಾಲಿಕೆಯಲ್ಲಿ ಬಿ.ಖಾತಾ ಆಂದೋಲನ ಚೆನ್ನಾಗಿ ನಡೆದಿದೆ. ಕಳೆದ 7 ತಿಂಗಳಲ್ಲಿ ನಾವು 30 ಸಾವಿರ ಖಾತೆಗಳನ್ನು ಮಾಡಿದ್ದೇವೆ. ರಾಜ್ಯದಲ್ಲಿಯೇ ಬಿ.ಖಾತಾ ಆಂದೋಲನದಲ್ಲಿ ತುಮಕೂರು 2ನೇ ಸ್ಥಾನದಲ್ಲಿದೆ. ಆದರೆ ಇ ಖಾತೆ ಮಾಡಲು ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಯಿಂದ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಸರಕಾರ ಹೊಸದಾಗಿ ತಂತ್ರಾಂಶ ಸಿದ್ದಪಡಿಸಿ, 11 ಪಾಲಿಕೆಗಳಿಗೂ ನೀಡಿದೆ. ಮುಂದಿನ ದಿನಗಳಲ್ಲಿ ಇ ಖಾತಾ ಆಂದೋಲನ ಚುರುಕುಗೊಳ್ಳಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಯುಜಿಡಿ ಯೋಜನೆ ಆರಂಭವಾಗಿ ಮೂವತ್ತು ವರ್ಷಗಳು ಕಳೆದರೂ ಎಲ್ಲಾ ಎರಿಯಾಗಳನ್ನು ತಲುಪಲು ಸಾಧ್ಯವಾಗಿಲ್ಲ . ಹಾಗೆಯೇ ಪಾಲಿಕೆಗೆ ಬಂದಿರುವ 200 ಕೋಟಿ ರೂಗಳ ವಿಶೇಷ ಅನುದಾನದಲ್ಲಿ ಈ ಬಾರಿ ಸುಮಾರು 50 ಕೋಟಿ ರೂಗಳನ್ನು ಯುಜಿಡಿಗೆ ಮತ್ತು 50 ಕೋಟಿ ರೂಗಳನ್ನು ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಉಪಯೋಗಿಸಲು ತೀರ್ಮಾನಿಸಲಾಗಿದೆ. ಅಲ್ಲದೆ ಪಾರ್ಕುಗಳ ನಿರ್ಮಾಣ, ನಿರ್ವಹಣೆಗೂ,ರಸ್ತೆಗಳ ಅಧುನಿಕರಣಕ್ಕೆ ಈ ಹಣದಲ್ಲಿ ಖರ್ಚು ಮಾಡಲಾಗುತ್ತಿದೆ. ಎಸ್,ಟಿ.ಪಿ ಪ್ಲಾಂಟ್ಗಳನ್ನು ಸಮರ್ಪಕಗೊಳಿಸಿ, ಜನರಿಗೆ ತೊಂದರೆಯಾಗದ ರೀತಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕಾರ್ಪೋರೇಷನ 40 ಕೋಟಿ ರೂ ಅನುದಾನದಲ್ಲಿ; ಸ್ಮಶಾನಗಳಿಗೆ, ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ,ಲೈಬ್ರರಿಗಳ ನಿರ್ವಹಣೆ, ಶೌಚಾಲಯ, ರಸ್ತೆ ಗುಂಡಿ ಮುಚ್ಚುವ ಕೆಲಸಗಳಿಗೆ ವಿನಿಯೋಗಿಸಲಾಗುತ್ತಿದೆ. ಕಸವಿಲೇವಾರಿ ಸಮಸ್ಯೆಯ ಪರಿಹಾರಕ್ಕೆ “ಪಿಕ್ ಮೈ ಗ್ರಾಬೆ೯ಜ್” ಎಂಬ ಹೊಸ ಅಫ್ ಸೃಜಿಸಿ, ಅದರ ಮೂಲಕ ಸಾರ್ವಜನಿಕರು ನೀಡುವ ಸಮಯಕ್ಕೆ ತಕ್ಕಂತೆ ಅವರ ಮನೆ ಬಳಿ ಹೋಗಿ ಕಸ ಸಂಗ್ರಹಕ್ಕೆ ಹೊಸ ವ್ಯವಸ್ಥೆ ಮಾಡಲಾಗಿದೆ. ಇದು ಇಡೀ ರಾಜ್ಯದಲ್ಲಿಯೇ ಮೊದಲು. ಇದುವರೆಗೂ ಸುಮಾರು 4500 ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತçಚಿಕಿತ್ಸೆ*ಮಾಡಲಾಗಿದೆ. ಖಾಲಿ ನಿವೇಶನಗಳಲ್ಲಿ ಪೊದೆ, ಗಿಡ-ಗಂಟೆ ಬೆಳೆದು ಜನರಿಗೆ ಆಗುತ್ತಿರುವ ತೊಂದರೆ ನೀವಾರಿಸಲು ಇದುವರೆಗೂ 1500 ಹೆಚ್ಚು ನಿವೇಶನದಾರರಿಗೆ ನೊಟೀಸ್ ನೀಡಿದ್ದು,ದಂಡ ವಿಧಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಆಯುಕ್ತರಾದ ಅಶ್ವಿಜ ಮಾಹಿತಿ ನೀಡಿದರು. ಈ ವೇಳೆ ಹಾಲಪ್ಪ ಪೌಂಡೇಷನ್ನ ಮುರುಳೀಧರ್ ಹಾಲಪ್ಪ, ಮುಖಂಡರಾದ ರೇವಣ್ಣ ಸಿದ್ದಯ್ಯ,ಸಿದ್ದಲಿಂಗೇಗೌಡ, ಷಣ್ಮುಖಪ್ಪ,ಮಾಜಿ ಕೌನ್ಸಿಲರ್ ಮಹೇಶ್,ಕೊಪ್ಪಲ್ ನಾಗರಾಜು, ತಾಜುದ್ದೀನ್ ಷರೀಫ್,ಡಮರುಗ ಉಮೇಶ್,ಹಂದಿಜೋಗಿ ರಾಮಕ್ಕ, ವಿಜಯಲಕ್ಷ್ಮಿ,ಸೌಭಾಗ್ಯ,ವಸುಂದರ,ಸಿಮೆಂಟ್ ಮಂಜಣ್ಣ, ಹಲವಾರು ಬಡಾವಣೆಗಳ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.



