ಜಗದೇಕಮಲ್ಲನ ಹೊಸ ಶಿಲಾಶಾಸನ ಪತ್ತೆ
ತುಮಕೂರು: ಕವಿ ಕುಮಾರವ್ಯಾಸನ ಕರ್ಮಭೂಮಿಯಾದ ಗದಗ ಜಿಲ್ಲೆಯ ಲಕ್ಕುಂಡಿಯ ಹಾಲುಗೊಂಡ ಬಸವೇಶ್ವರ ದೇವಾಲಯದಲ್ಲಿ ಪ್ರಮುಖ ಶಿಲಾಶಾಸನವೊಂದು ಪತ್ತೆಯಾಗಿದೆ. ಈ ಶಾಸನವು ದೇವಾಲಯದ ಒಳಗೆ ನವರಂಗದ ಪೂರ್ವಭಾಗದ ಛತ್ತಿನ ತೊಲೆಯಲ್ಲಿ ಕಂಡುಬoದಿದೆ.
ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎಂ. ಕೊಟ್ರೇಶ್ ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಸುಧಾ ಜೆ. ಅವರ ಸಂಶೋಧನೆಯಿoದ ಈ ಶಾಸನದ ವಿವರಗಳು ಬೆಳಕಿಗೆ ಬಂದಿವೆ.
ದೇವಾಲಯದ ಪಶ್ಚಿಮಾಭಿಮುಖವಾಗಿದ್ದ ಛತ್ತಿನಲ್ಲಿ ಕಪ್ಪನೆ ಮೇಣದಲ್ಲಿ ಮುಚ್ಚಿಹೋಗಿದ್ದ ಈ ಶಾಸನ ಇರುವುದನ್ನು ಸಂಶೋಧಕರು ಮೊದಲ ಬಾರಿಗೆ ಪತ್ತೆ ಹಚ್ಚಿದ್ದಾರೆ. ಕಪ್ಪುಮಿಶ್ರಿತ ನೀಲಿ ಛಾಯೆಯ ಬಳಪದ ಶಿಲೆಯಲ್ಲಿ ಈ ಶಾಸನವನ್ನು ಕಡೆಯಲಾಗಿದೆ.
“ಒಟ್ಟು 18 ಸಾಲುಗಳನ್ನು ಹೊಂದಿರುವ ಈ ಶಾಸನವು ಕಲ್ಯಾಣ ಚಾಲಕ್ಯರ ಕ್ರಿ.ಶ. 1137-1147 ರಲ್ಲಿ ಆಳ್ವಿಕೆ ಮಾಡಿದ್ದ ಜಗದೇಕಮಲ್ಲನಿಗೆ ಸೇರಿದೆ. ಶಾಸನದಲ್ಲಿ ಇಂದಿನ ಹಾಲುಗೊಂಡ ಬಸವೇಶ್ವರ ದೇವಾಲಯದ ಮೂಲ ರೂಪವನ್ನು ಗುರುತಿಸಬಹುದು. ಶಾಸನದಲ್ಲಿ ಅದನ್ನು ಹಾಳುಗೆಡವದಂತೆ ಎಚ್ಚರಿಕೆ ನೀಡುವ ಶಾಪಾಶಯ ಇದೆ. ದಾನದತ್ತಿಗಳ ವಿವರಣೆಗಳಿವೆ. ಕರ್ನಾಟಕದ ಶಾಸನಗಳ ಸಾಲಿಗೆ ಇದು ಒಂದು ಹೊಸ ಸೇರ್ಪಡೆ” ಎಂದು ಪ್ರೊ. ಎಂ. ಕೊಟ್ರೇಶ್ ತಿಳಿಸಿದ್ದಾರೆ.
ಲಕ್ಕುಂಡಿಯಲ್ಲಿ ದೊರೆಯುವ ಜಗದೇಕಮಲ್ಲನ ಮೊದಲ ಶಾಸನ ಇದಾಗಿದೆ. ಪ್ರಸ್ತುತ ಇರುವ ಹಾಲಗೊಂಡ ದೇವಾಲಯವನ್ನು 1000 ವರ್ಷಗಳ ಹಿಂದೆ ಗವರೇಶ್ವರ ಎಂದು ಕರೆಯಲಾಗುತ್ತಿತ್ತು ಎಂಬ ಮಾಹಿತಿಯನ್ನು ಇದು ನೀಡುತ್ತದೆ.
ದುಷ್ಟರನ್ನು ಶಿಕ್ಷಿಸುವ ಶಿಷ್ಟರನ್ನು ರಕ್ಷಿಸುವ ಮಹತ್ವದ ಗುಣವನ್ನು ಹೊಂದಿದ ಪಂಡಿತೋತ್ತಮರ ವಾಸ ಆ ಕಾಲದಲ್ಲಿತ್ತು. ವೇದ ಮತ್ತು ಧರ್ಮಶಾಸ್ತçವನ್ನು ಓದುವುದು ಮಹತ್ವದ ಕಾರ್ಯವಾಗಿತ್ತು. ಧ್ಯಾನ, ಧಾರಣ, ಪಾರಾಯಣ, ಜಪ, ಸಮಾಧಿ, ಮುಂತಾದವುಗಳಿಗೆ ಪ್ರಮುಖ ಸ್ಥಾನವಿತ್ತು. ಪರೋಪಕಾರವನ್ನು ಮಾಡುವ, ಆಶ್ರಯ ಬೇಡಿ ಬಂದವರಿಗೆ ಆಶ್ರಯ ನೀಡುವ ಕಲ್ಪವೃಕ್ಷದಂತಹ ಗುಣ ರಾಜನಲ್ಲಿತ್ತು ಎಂದು ಶಾಸನ ಉಲ್ಲೇಖಿಸಿರುವ ಬಗ್ಗೆ ಪ್ರೊ. ಎಂ. ಕೊಟ್ರೇಶ್ ತಿಳಿಸಿದ್ದಾರೆ.
ಜಗದೇಕಮಲ್ಲನ ಹೊಸ ಶಿಲಾಶಾಸನ ಪತ್ತೆ

Leave a comment
Leave a comment