ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿರುವ ಜನಪ್ರಿಯ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಬುಧವಾರ ಸಿಹಿ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.
ತುಮಕೂರು ತಾಲ್ಲೂಕು ಗೂಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೂಳೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.೨೦೦೦ ನೀಡುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ಮಹಿಳೆಯರು ಸದೃಢರಾಗಬೇಕು, ಆರ್ಥಿಕವಾಗಿ, ಮಾನಸಿಕವಾಗಿ ಬಲಶಾಲಿಗಳಾಗಬೇಕು ಎಂಬ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಅAತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿದಾರರ ಜೊತೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಧ್ಯಾಹ್ನದ ಬಿಸಿಯೂಟ ನೌಕರರು ಈ ಕಾರ್ಯಕ್ರಮದಡಿ ಬರಲಿದ್ದು, ಯಾವುದೇ ಊಹಾ-ಪೋಹಗಳಿಗೆ ಇಲ್ಲಿ ಆಸ್ಪದ ಇಲ್ಲ ಎಂದು ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ೫.೧೨ ಲಕ್ಷ ಕುಟುಂಬಗಳ ಅರ್ಹ ಯಜಮಾನಿಯರು ನೊಂದಾಣಿ ಮಾಡಿಕೊಂಡಿದ್ದು, ಉಳಿದವರೂ ಸಹ ನೊಂದಾವಣಿ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ಕಾಲಮಿತಿ ಇಲ್ಲ, ನಿಮ್ಮ ಬ್ಯಾಂಕ್ ಖಾತೆ ಅಕೌಂಟ್ಗೆ ಆಧಾರ್ ಲಿಂಕ್ ಆದ ತಕ್ಷಣ ಧೋಖಾ ಇಲ್ಲದಂತೆ ಸರ್ಕಾರದ ಖಜಾನೆ ಮುಖಾಂತರ ಪ್ರತಿ ತಿಂಗಳು ನಿಮ್ಮ ಖಾತೆಗೆ ೨೦೦೦ ರೂ. ಹಣ ಬರಲಿದೆ ಎಂದು ತಿಳಿಸಿದರು.
ಮಹಿಳೆಯರನ್ನು ಸದೃಢತೆ ಮಾಡುವ ಉದ್ಧೇಶದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಹಾಗೆಯೇ ನಮ್ಮ ಜಿಲ್ಲೆಯಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರು ಎಲ್ಲಾ ತಾಲ್ಲೂಕುಗಳಲ್ಲೂ ಪ್ರವಾಸ ಯಾವ ಹೆಣ್ಣುಮಗಳಿಗೂ ಅನ್ಯಾಯವಾಗದಂತೆ ಸರ್ಕಾರದ ಯೋಜನೆಗಳನ್ನು ಪರಿಷೃತವಾಗಿ ಅನುಷ್ಠಾನಗೊಳಿಸಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ತಹಶೀಲ್ದಾರ್, ಜಿಪಂ ಸಿಇಒ, ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ ಎಂದರು.
ನಿಮ್ಮ ಜೊತೆ ನಾವಿದ್ದೇವೆ, ರಾಜ್ಯ ಸರ್ಕಾರ ಸದಾ ನಿಮ್ಮ ಜೊತೆಗಿರುತ್ತದೆ. ಯಾವುದೇ ಸುಳ್ಳು ವದಂತಿಗಳಿಗೆ ಹಾಗೂ ಫೆಸ್ಬುಕ್, ವಾಟ್ಸ್ ಆಪ್ ವದಂತಿಗಳಿಗೆ ಕಿವಿಗೊಡಬೇಡಿ, ಚುನಾವಣಾ ಪೂರ್ವ ಕೊಟ್ಟಂತಹ ೭೬ ವಾಗ್ದಾನಗಳ ಪೈಕಿ ಈಗಾಗಲೇ ನಾಲ್ಕು ಯೋಜನೆಗಳು ಅನುಷ್ಠಾನಗೊಂಡಿವೆ. ಇನ್ನುಳಿದ ವಾಗ್ದಾನಗಳನ್ನು ಮಾತು ತಪ್ಪದೇ ಜಾರಿಗೆ ತಂದೇ ತೀರುತ್ತೇವೆ. ಇದರಿಂದ ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.



