ತುಮಕೂರು- ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಕೃಷ್ಣ ಚಿತ್ರಮಂದಿರಕ್ಕೆ ರಾಜಯೋಗ ಸಿನಿಮಾದ ನಾಯಕ ನಟ ಧರ್ಮಣ್ಣ ಕಡೂರು, ನಟಿ ನಿರೀಕ್ಷಾರಾವ್, ನಿರ್ದೇಶಕ ಲಿಂಗರಾಜು ಸೇರಿದಂತೆ ಚಿತ್ರತಂಡ ಭೇಟಿ ನೀಡಿ ಸಿನಿಮಾ ವೀಕ್ಷಿಸಿತು.
ಚಿತ್ರಮಂದಿರಕ್ಕೆ ಭೇಟಿ ನೀಡಿದ ರಾಜಯೋಗ ಚಿತ್ರತಂಡದ ನಾಯಕ ನಟ ಧರ್ಮಣ್ಣ ಕಡೂರು, ನಟಿ ನಿರೀಕ್ಷಾರಾವ್, ನಿರ್ದೇಶಕ ಲಿಂಗರಾಜು ಅವರಿಗೆ ಚಿತ್ರದ ನಿರ್ಮಾಪಕರಾದ ಚಿಕ್ಕನಾಯನಹಳ್ಳಿ ಮೂಲದ ಪ್ರಭು ಅವರು ಪುಷ್ಪಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದರು.
ಶ್ರೀಕೃಷ್ಣಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ ಚಿತ್ರ ತಂಡ ನೆರೆದಿದ್ದ ಪ್ರೇಕ್ಷಕರ ಅಭಿಪ್ರಾಯ ಸಂಗ್ರಹಿಸಿದರು.
ನಂತರ ಮಾತನಾಡಿದ ನಾಯಕ ನಟ ಧರ್ಮಣ್ಣ ಕಡೂರು ಅವರು, ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಕುಳಿತು ನೋಡುವ ಸಿನಿಮಾ ಇದಾಗಿದೆ. ಕುಟುಂಬ ಸಮಸ್ಯೆ, ಜಂಜಾಟವನ್ನು ತಮಾಷೆಯಾಗಿ ಹೇಳುವ ಪ್ರಯತ್ನವನ್ನು ಈ ಸಿನಿಮಾದ ಮೂಲಕ ಮಾಡಲಾಗಿದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ನಾನು ದೊಡ್ಡ ದೊಡ್ಡ ಕಲಾವಿದರ ಜತೆ ಸುಮಾರು ೩೨ ಚಿತ್ರಗಳಲ್ಲಿ ನಟಿಸಿದ್ದೇನೆ. ಈಗ ರಾಜಯೋಗ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದೇನೆ ಎಂದು ಅವರು ಹೇಳಿದರು.
ಹಳ್ಳಿಯಲ್ಲಿ ಜಾಸ್ತಿ ಓದಿದ ಯುವಕರು ಏನಾದರೂ ಒಳ್ಳೆಯದನ್ನು ಹೇಳಿದರೆ ಅದನ್ನು ಜನ ಪಾಸಿಟಿವ್ ಆಗಿ ತಗೊಳ್ಳಲ್ಲ. ಬದಲಾಗಿ ಅವನು ತರ್ಲೆ ಎಂದು ಹೇಳಿ ತುಂಬಾ ಜನ ಕಾಲೆಳೆಯುತ್ತಾರೆ. ಮನೆಯಲ್ಲಿ ಕುಳಿತುಕೊಂಡರೆ ಯಾರಿಗೂ ರಾಜಯೋಗ ಬರಲ್ಲ, ಕೆಲಸ ಮಾಡೋರಿಗೆ ಮಾತ್ರ ರಾಜಯೋಗ ಬರುತ್ತದೆ ಎನ್ನುವುದು ಈ ಸಿನಿಮಾದ ಸಾರಾಂಶ ಎಂದರು.
ರಾಜಯೋಗ ಚಿತ್ರದ ನಿರ್ಮಾಪಕರಾ ಪ್ರಭು ಅವರು ತುಮಕೂರು ಜಿಲ್ಲೆಯವರೇ. ನಮ್ಮ ನಿರ್ಮಾಪಕರು ಹೊಸಬರಿಗೆ ಪ್ರೋತ್ಸಾಹ ನೀಡುತ್ತಾರೆ ಎಂದು ಅವರು ಹೇಳಿದರು.
ಚಿತ್ರದ ನಿರ್ಮಾಪಕ ಪ್ರಭು ಮಾತನಾಡಿ, ರಾಜಯೋಗ ಹಳ್ಳಿ ಸೊಗಡಿನ ಸಿನಿಮಾ ಆಗಿದೆ. ಪ್ರತಿಯೊಬ್ಬರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಚಿತ್ರದಲ್ಲಿ ಹಿರಿಯ ಕಲಾವಿದರಾದ ನಾಗೇಂದ್ರ ಷಾ, ಅಪೂರ್ವ, ಖುಷಿ, ಉಮಾಹೆಬ್ಬಾರ್ ಸೇರಿದಂತೆ ನುರಿತ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಲಿಂಗರಾಜು, ರಾಜು ಅಶೋಕಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ರಾಜಯೋಗ ಸಿನಿಮಾ ತಂಡದಿಂದ ತುಮಕೂರಿನಲ್ಲಿ ಸಿನಿಮಾ ವೀಕ್ಷಣೆ
Leave a comment
Leave a comment