ಇಂದಿನ ಮಕ್ಕಳ ಓದನ್ನು ಮೊಬೈಲ್ ಮತ್ತು ಟಿ ವಿ ಮಾಧ್ಯಮಗಳು ಕಿತ್ತುಕೊಳ್ಳುತ್ತಿವೆ. ಮೊಬೈಲ್ ಗೀಳಿಗೆ ಒಳಗಾಗುತ್ತಿರುವ ಮಕ್ಕಳು ತಮ್ಮ ಭವಿಷ್ಯವನ್ನೇ ಬಲಿಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಪೋಷಕರು ತಮ್ಮ ತಮ್ಮ ಮನೆಗಳಲ್ಲಿ ಸಂಜೆ ಹೊತ್ತಿನಲ್ಲಿ ಟಿವಿ ಹಾಕುವುದನ್ನು ಬಿಡಬೇಕು. ಆ ಮೂಲಕ ಮಕ್ಕಳ ಓದಿಗಾಗಿ ತ್ಯಾಗ ಮಾಡುವ ಮನಸ್ಸು ಮಾಡಬೇಕಿದೆ ಎಂದು ರೀಡ್ ಬುಕ್ ಫೌಂಡೇಷನ್ ಹಾಗೂ ರೋಟರಿ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಶಿವಶಂಕರ್ ಕಾಡದೇವರಮಠ ಅಭಿಪ್ರಾಯಪಟ್ಟರು.
ಗುಬ್ಬಿ ತಾಲ್ಲೂಕು, ಸಿಎಸ್ ಪುರ ಹೋಬಳಿಯ ಮಾವಿನಹಳ್ಳಿ ಗ್ರಾಮದಲ್ಲಿನನ ಶ್ರೀ ಪ್ರಗತಿಪರ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ವಿಕಸನ ಶಿಬಿರ ಮತ್ತು ‘ನನ್ನ ಏಳ್ಗೆಗೆ ನಾನೇ ಶಿಲ್ಪಿ’ ಎಂಬ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಿನ ಮಕ್ಕಳು ಭವಿಷ್ಯವನ್ನು ರೂಪಿಸಿಕೊಳ್ಳಲು ಹೆಚ್ಚೆಚ್ಚು ಓದಬೇಕು, ಓದುವುದು ಎಂದರೆ ಶಾಲೆಯಲ್ಲಿ ರ್ಯಾಂಕ್ ಹಿಂದೆ ಬೀಳುವುದಲ್ಲ. ವಿವಿಧ ಪ್ರಸಿದ್ಧ ವ್ಯಕ್ತಿಗಳ ಚರಿತ್ರೆಗಳನ್ನು, ವಿವಿಧ ಸಾಹಿತ್ಯ ಪ್ರಕಾರದ ಪುಸ್ತಕಗಳನ್ನು ಓದಬೇಕು. ಇದಕ್ಕೆ ಶಾಲೆಯಲ್ಲಿರುವ, ಗ್ರಾಮದಲ್ಲಿರುವ ಗ್ರಂಥಾಲಯಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ. ಎಂ ರಾಘವೇಂದ್ರ ಮಾತನಾಡಿ ಪ್ರತಿ ಮನುಷ್ಯನಿಗೆ ತಮ್ಮ ಫೇವರೇಟ್ ಹೀರೋ, ತಿಂಡಿ ತಿನಿಸು, ವ್ಯಕ್ತಿಗಳು ಇರುತ್ತವೆ. ಇದರ ಹಾಗೆಯೇ ಪ್ರತಿ ವಿದ್ಯಾರ್ಥಿಗೆ ತನ್ನ ತರಗತಿ ಪಠ್ಯದ ಜೊತೆಗೆ ಫೇವರೇಟ್ ಪುಸ್ತಕವನ್ನು ಸಹ ಇಟ್ಟುಕೊಳ್ಳಬೇಕು. ಹೀಗೆ ಇಟ್ಟುಕೊಳ್ಳಬೇಕೆಂದರೆ, ಹೆಚ್ಚೆಚ್ಚು ಪುಸ್ತಗಳನ್ನು ಓದುವಂತವರಾಗಬೇಕು. ಮನುಷ್ಯನ ಸಂಪೂರ್ಣ ವ್ಯಕ್ತಿಯನ್ನಾಗಿ ರೂಪುಸುವುದು ಶಿಕ್ಷಣ ಮತ್ತು ಓದು ಆಗಿದೆ. ಓದುವ ವಿದ್ಯಾರ್ಥಿಗಳಿಗೆ ಓದುವ ಸ್ಥಳ, ಪರಿಸರ ಮುಖ್ಯವಾಗಿರುತ್ತದೆ. ಇದರಿಂದ ಅ್ಯಕ್ಟಿವ್ ರೀಡಿಂಗ್ ಇರುತ್ತದೆ. ಇದರಿಂದ ಅಧ್ಯಯನವು ಪೂರಕವಾಗಿರುತ್ತದೆ ಎಂದರು. ಪುಸ್ತಕವಾಗಲಿ, ಶಾಲೆಯ ಪಠ್ಯವನ್ನಾಗಲಿ ಓದಿದ ನಂತರ, ಚರ್ಚಾ ಬಳಗ ರೂಪಿಸಿಕೊಂಡು ಓದಿದ ಪುಸ್ತಕದ ಬಗ್ಗೆ ಚರ್ಚೆ ಮಾಡಬೇಕು. ಇದರಿಂದ ಅಧ್ಯಯನದ ಜೊತೆಗೆ ಉತ್ತಮವಾಗಿ ಮಾತನಾಡುವ ಕೌಶಲ್ಯವು ಬೆಳೆಯುತ್ತದೆ ಎಂದರು.

ಕಾರ್ಯಕ್ರಮವನ್ನು ಪ್ರಗತಿಪರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಎಂವಿ ಬಸವರಾಜು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಗುಬ್ಬಿ ಸರ್ಕಾರಿ ಪದವಿ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಉಮೇಶ್ ಕೆ ಬಾಗೇವಾಡಿರವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮೇಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ವೈ ಕೆ ಶ್ರೀನಿವಾಸ್, ಉಪನ್ಯಾಸಕ ಡಾ. ಪವನಗಂಗಾಧರ, ಪ್ರೌಢಶಾಲೆಯ, ಬೆಟ್ಟಸ್ವಾಮಯ್ಯ, ಚಂದ್ರಯ್ಯ, ಭಾರತಿ, ವೆಂಕಟೇಶ್, ಟಿ ಎನ್ ವಿಶ್ವನಾಥ್, ಅಂದಾನಯ್ಯ, ರಾಜೇಶ್ವರಿ, ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಟ್ಟಸ್ವಾಮಯ್ಯ ಸ್ವಾಗತಿಸಿ, ಕುರುಡಿಹಳ್ಳಿ ವೆಂಕಟೇಶ್ ವಂದಿಸಿದರು, ಇಡೀ ಕಾರ್ಯಕ್ರಮವನ್ನು ಉಪನ್ಯಾಸಕ ಮಾರುತೇಶ್ ಟಿ ಎಸ್, ನಿರೂಪಿಸಿದರು.



