ತುಮಕೂರು: ಗ್ರಾಮೀಣ ಯುವಜನತೆ ಹಿಂಜರಿಕೆ ಬಿಟ್ಟು, ತಂದೆ, ತಾಯಿಗಳ ಆಶಯದಂತೆ ತಾವು ಕಲಿತಿರುವ ವಿದ್ಯೆಯನ್ನು ಬಳಕೆ ಮಾಡಿಕೊಂಡು ನಿಮ್ಮ ಸ್ವಂತ ಕಾಲ ಮೇಲೆ ನಿಲ್ಲುವಂತಹ ಪ್ರಯತ್ನ ಮಾಡಬೇಕು ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತ ಸರಕಾರದ ದೀನದಯಾಳ್ ಉಪಾಧ್ಯಾಯ ಕೌಶಲ್ಯಾಭಿವೃದ್ದಿ ಮಂಡಳಿ ಹಾಗೂ ಕರ್ನಾಟಕ ಸರಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರ್ಹತಾ ಪತ್ರ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮತನಾಡಿದ ಅವರು, ಇಂದು ನಿಮ್ಮ ಮುಂದೆ ಅವಕಾಶಗಳ ಮಹಾಪೂರವೇ ಇದೆ. ವಿವಿಧ ಕೈಗಾರಿಕಾ ಕಾಡಿಡಾರ್ಗಳು ತುಮಕೂರು ಜಿಲ್ಲೆಗೆ ಆಗಮಿಸುತಿದ್ದು, ಇವುಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಹತ್ತಾರು ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ. ಹಾಗಾಗಿ ವಿದ್ಯಾರ್ಥಿಗಳು ತಮಗೆ ಸರಿ ಹೊಂದುವಂತಹ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡು ದೇಶದ ಅಭಿವೃದ್ದಿಯಲ್ಲಿ ದೃಢ ಹೆಜ್ಜೆ ಇಡುವಂತೆ ಸಲಹೆ ನೀಡಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಹ ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶಗಳ ಜೊತೆಗೆ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರೆ ಮೊದಲು ನೀವು ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬೇಕಿದೆ. ಇದರ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಓದುವುದನ್ನು ಅಭ್ಯಾಸ ಮಾಡಿಕೊಂಡರೆ ಇಂಗ್ಲಿಷ್ ಕಷ್ಟ ಎಂಬದರಿಂದ ಹೊರಬರಲು ಸಾಧ್ಯ. ಹಳ್ಳಿ ಮಕ್ಕಳಲ್ಲಿ ಧೈರ್ಯ ಹೆಚ್ಚು, ಆದರೆ ಇದು ಆತ್ಮಸ್ಥೈರ್ಯವಾಗಿ ಬದಲಾಗಬೇಕಿದೆ. ದೂರದ ಊರುಗಳಿಗೆ ಹೋಗಿ ದುಡಿಯಬಲ್ಲ ಎಂಬ ದೃಢ ನಿರ್ಧಾರ ಮಾಡಿ ಮುನ್ನೆಡೆದರೆ ನಿರುದ್ಯೋಗ ಸಮಸ್ಯೆ ನಿಮ್ಮನ್ನು ಎಂದಿಗೂ ಕಾಡುವುದಿಲ್ಲ. ಎಲ್ಲರು ಒಳ್ಳೆಯ ರೀತಿಯಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಸಲಹೆ ನೀಡಿದರು.
ಕೌಶಲ್ಯ ಅಭಿವೃದ್ದಿ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಸಿಇಓ ಡಾ.ವೇಣುಗೋಪಾಲ್ ಮಾತನಾಡಿ, ಕೇಂದ್ರ ಸರಕಾರದ ದೀನ ದಯಾಳ್ ಉಪಾಧ್ಯಯ ಗ್ರಾಮೀಣ ಕೌಶಲ್ಯ ಯೋಜನೆ ಗ್ರಾಮೀಣ ಮಕ್ಕಳಿಗೆ ಉದ್ಯೋಗ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಬಹಳ ಮಹತ್ವದ ಯೋಜನೆಯಾಗಿದೆ. ಈಗಾಗಲೇ ತರಬೇತಿ ಪಡೆದುಕೊಂಡ ಯುವಜನರು ದೇಶದ ದೊಡ್ಡ ದೊಡ್ಡ ಕೈಗಾರಿಕಾ ನಗರಗಳಲ್ಲಿ ಉದ್ಯೋಗ ಮಾಡುತ್ತಿದ್ದು, ಇವರು ತಮ್ಮ ಹಳ್ಳಿಯ ಇತರೆ ಜನರಿಗೂ ಮಾಹಿತಿ ನೀಡುವ ಮೂಲಕ ಅವರು ಸಹ ಈ ಯೋಜನೆಯ ಲಾಭ ಪಡೆಯಲು ಸಹಕಾರಿಯಾಗುವಂತೆ ಸಲಹೆ ನೀಡಿದರು.
ಪ್ಯಾರಾಡಿಗ್ಮ್ ಐಟಿ ಟೆಕ್ನಾಲಜಿ ಸರ್ವಿಸ್ ಪ್ರ ಲಿ ನ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ದೊಡ್ಡಿ ಯೋಗೀಶ್ಕುಮಾರ್ ಮಾತಾಡಿ, ಕರ್ನಾಟಕ ಹಾಗೂ ಭಾರತ ಸರಕಾರದ ಸಹಕಾರದಲ್ಲಿ ೨೦೨೧ರಲ್ಲಿ ಆರಂಭಗೊಂಡು ಇದುವರೆಗೂ ೧೪ ಬ್ಯಾಚ್ ತರಬೇತಿ ಮುಗಿದಿದೆ. ಸಾವಿರಾರು ಜನರು ತರಬೇತಿ ಪಡೆದು ನೋಯಿಡಾ, ಚೆನೈನಂತಹ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸು ತಿದ್ದಾರೆ. ಕೇಂದ್ರದ ಗ್ರಾಮೀಣಾಭಿವೃದ್ದಿ ಸಚಿವಾಲಯದ ಅಡಿಯಲ್ಲಿ ಬರುವ ದೀನದಯಾಳ್ ಉಪಾಧ್ಯಯ ಗ್ರಾಮೀಣ ಕೌಶಲ್ಯಾಭಿವೃದ್ದಿ ಯೋಜನೆ ಗ್ರಾಮೀಣ ಭಾಗದಲ್ಲಿರುವ ನಿರುದ್ಯೋಗವನ್ನು ಮೂಲೋತ್ಪಟನೆ ಮಾಡುವುದೇ ಆಗಿದೆ. ರಾಜ್ಯ ಮತ್ತು ಕೇಂದ್ರದಿಂದ ಒಳ್ಳೆಯ ಸಹಕಾರ ಸಿಗುತ್ತದೆ. ಇದರ ಲಾಭವನ್ನು ಗ್ರಾಮೀಣ ಯುವಕರು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಸಿಬ್ಬಂದಿಗಳಾದ ಅಫ್ರಿನ್, ಕಿರಣ್, ರೂಪೇಶ್ ಕುಮಾರ್, ಶಾಜಿಯ, ಶಾಹ್ಜಾದಿ, ಭಾವನ, ಚೈತ್ರ, ಮಹೇಶ್, ಪ್ರಗತಿ ಹಾಗೂ ಇತರರು ಉಪಸ್ಥಿತರಿದ್ದರು.