ತುಮಕೂರು:ಕನ್ನಡ ನೆಲ,ಜಲ,ಭಾಷೆ,ಗಡಿ ವಿಚಾರದಲ್ಲಿ ಕಾಂಗ್ರೆಸ್,ಜೆಡಿಎಸ್,ಬಿಜೆಪಿ ಎಂಬ ಭೇಧಭಾವ ಕನ್ನಡ ಸೇನೆಗೆ ಇಲ್ಲ.ತಪ್ಪು ಕಂಡು ಬಂದರೆ ಎಲ್ಲಾ ಪಕ್ಷಗಳ ವಿರುದ್ದವೂ ಹೋರಾಟಕ್ಕಿಳಿಯಲಿದೆ ಎಂದು ಕನ್ನಡಸೇನೆಯ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ತಿಳಿಸಿದ್ದಾರೆ.
ನಗರದ ಹರ್ಬನ್ ರೆಸಾರ್ಟ್ನಲ್ಲಿ ಕನ್ನಡಸೇನೆವತಿಯಿಂದ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅವರು ೫೬ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡದ ಪ್ರಗತಿ-ನಾಡಿನ ಪುರೋಭಿವೃದ್ದಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಪ್ರಸ್ತುತ ಕಾಂಗ್ರೆಸ್ ಸರಕಾರ ಐದು ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಿದೆ.ಆದರೆ ಗ್ಯಾರಂಟಿಗಳ ಜಾರಿ ಬರದಲ್ಲಿ ಅನಗತ್ಯ ತೆರಿಗೆ ಹೇರಿ,ಭ್ರಷ್ಟಾಚಾರದಲ್ಲಿ ತೊಡಗಿದರೆ ಸರಕಾರದ ವಿರುದ್ದ ಹೋರಾಟ ಖಂಡಿತ ಎಂದರು.
ಬಿಜೆಪಿ ಪಕ್ಷ ಶೇ೪೦ ಕಮಿಷನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಅದರ ಗುರಿಯಾಗಬೇಕು.ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಸರಕಾರವನ್ನು ಒತ್ತಾಯಿಸಿದ ಕೆ.ಆರ್.ಕುಮಾರ್,ನಾಡಿನ ಸಂಪತ್ತನ್ನು ಕಾಪಾಡಬೇಕು.ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು.ರೈತರಿಗೆ,ಕಾರ್ಮಿಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು.ಬಿಜೆಪಿ ಸರಕಾರವಿದ್ದಾಗ ಹೆಚ್ಚಳ ಮಾಡಿರುವ ವಿದ್ಯುತ್ ಬಿಲ್ ರದ್ದು ಪಡಿಸುವಂತೆ ಸರಕಾರವನ್ನು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಒತ್ತಾಯಿಸಿದರು.
ಸನ್ಮಾನ ಸ್ವಿಕರಿಸಿದ ಪರಿಸರ ತಜ್ಞ ಬೇವಿನ ಮರದ ಸಿದ್ದಪ್ಪ ಮಾತನಾಡಿ,ನಾಡು,ನುಡಿ,ನೆಲ,ಜಲದ ವಿಚಾರದಲ್ಲಿ ಕನ್ನಡ ಸಂಘಟನೆಗಳು ರಾಜೀ ಸಂಧಾನ ಸೂತ್ರ ಅನುಸರಿಸದೆ,ಕನ್ನಡ ನೆಲಕ್ಕೆ ಧಕ್ಕೆ ತರುವವರ ವಿರುದ್ದ ಒಗ್ಗೂಡಿ ಹೋರಾಟ ನಡೆಸುವ ಮೂಲಕ ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ.ಇದರ ಜೊತೆಗೆ ಕನ್ನಡ ಭಾಷೆ ಉಳಿಯಲು ಮನೆಯಿಂದಲೇ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು.ನಮ್ಮ ಸುತ್ತಮುತ್ತಲಿನ ಪರಿಸರ ಉಳಿಸಲು ನಾವೆಲ್ಲರೂ ಗಿಡ ನೆಡುವುದರ ಮೂಲಕ, ನೀರಿನ ತಾಣಗಳಾದ ಕೆರೆ, ಕಟ್ಟೆಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬಳುವಳಿಯಾಗಿ ನೀಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ,ಕನ್ನಡಪರ ಸಂಘಟನೆಗಳಲ್ಲಿ ಪ್ರಾಮಾಣಿಕತೆ ಎಂಬುದು ಉಳಿದಿದ್ದರೆ ಅದು ಕನ್ನಡಸೇನೆಯಲ್ಲಿ ಮಾತ್ರ.ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಸಂಘಟನೆ ನಡೆದುಕೊಂಡಿದೆ.ಯಾವುದೇ ಪಕ್ಷಕ್ಕಾಗಲಿ, ಜಾತಿಗಾಗಲಿ ಸಂಘಟನೆಯನ್ನು ಒತ್ತೆ ಇಟ್ಟಿಲ್ಲ.ಕೆಲವರು ಚುನಾವಣೆ ಸಂದರ್ಭದಲ್ಲಿ ವಾಮ ಮಾರ್ಗದಲ್ಲಿ ಕನ್ನಡ ಪರ ಸಂಘಟನೆಗಳ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ.ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಿದೆ.ಕನ್ನಡಭಾಷೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕಿದೆ.ಗ್ಯಾರಂಟಿಗಳ ಜೊತೆಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯವನ್ನುಉಚಿತವಾಗಿ ದೊರೆಯವಂತೆ ಸರಕಾರ ಮಾಡಬೇಕಾಗಿದೆ ಎಂದರು.
ದಿ.ಡೈಲಿ ನ್ಯೂಸ್ ಪತ್ರಿಕೆಯ ಸಂಪಾದಕರಾದ ಡಾ.ಎಂ.ಮಹಮದ್ ಭಾಷಗೊಳ್ಯಂ ಅವರು ಕನ್ನಡದ ಪ್ರಗತಿ- ನಾಡಿನ ಪುರೋಭಿವೃದ್ದಿ ಎಂಬ ವಿಚಾರ ಕುರಿತು ಉಪನ್ಯಾಸ ನೀಡಿದರು. ಇದೇ ವೇಳೆ ಪರಿಸರ ತಜ್ಞ ಬೇವಿನ ಮರದ ಸಿದ್ದಪ್ಪ,ಕನ್ನಡಸೇನೆ ಸಲಹಾ ಸಮಿತಿ ಸದಸ್ಯ ಎಲ್.ಎನ್.ಗೌಡ,ಬೆಸ್ಕಾಂ ನಿವೃತ್ತ ಅಧೀಕ್ಷಕ ಇಂಜಿನಿಯರ್ ನಾಗರಾಜು.ಪಿ.ಎನ್., ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ನೇತಾಜಿ ಶ್ರೀಧರ್, ಸಲಹಾ ಸಮಿತಿ ಸದಸ್ಯ ಕೆ.ಎಸ್.ಸಂತೋಷ ಅವರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಪಾಲಿಕೆ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್,ಕೊರಟಗೆರೆ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಬಸವರಾಜು, ಕನ್ನಡಸೇನೆ ಗೌರವಾಧ್ಯಕ್ಷ ವೆಂಕಟಾಚಲ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು
ಕಾಂಗ್ರೆಸ್,ಜೆಡಿಎಸ್,ಬಿಜೆಪಿ ಎಂಬ ಭೇಧಭಾವ ಕನ್ನಡ ಸೇನೆಗೆ ಇಲ್ಲ
Leave a comment
Leave a comment