ಪತ್ರಕರ್ತ ಜಿ.ಇಂದ್ರಕುಮಾರ್ ಕೃತಿ ಲೋಕಾರ್ಪಣೆ: ಪ್ರಶಸ್ತಿ ವಿತರಣೆ ಪತ್ರಕರ್ತ ಸಾಹಿತಿಯಾದರೆ ಮೌಲ್ಯ ಹೆಚ್ಚಳ: ಡಾ.ಸೋಮಶೇಖರ್ತುಮಕೂರು: ಪತ್ರಕರ್ತರಾದವರು ಸಾಹಿತಿಯಾದರೆ ಅವರ ಸಾಹಿತ್ಯದಲ್ಲಿನ ಮೌಲ್ಯ ಜಾಸ್ತಿ ಇರುತ್ತದೆ. ಪತ್ರಕರ್ತರಲ್ಲಿ ಸಹಜವಾಗಿ ಚಿಕಿತ್ಸಕ ಗುಣ, ಸಮಾಜಮುಖಿ ಚಿಂತನೆಗಳಿದ್ದು ಅವು ಸಾಹಿತ್ಯ ರಚನೆಯಲ್ಲೂ ಪ್ರಭಾವ ಬೀರಿ ಪರಿಣಾಮಕಾರಿ ಸಾಹಿತ್ಯ ರಚನೆ ಸಾಧ್ಯವಾಗುತ್ತದೆ ಎಂದು ನಿವೃತ್ತ ಐಎಎಸ್ ಅಧಿಕಾರಿ, ಶರಣ ಸಾಹಿತ್ಯ ಪರಿಷತ್ನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು. ಭಾನುವಾರ ನಗರದ ಕನ್ನಡ ಭವನದಲ್ಲಿ ಲೇಖಕ, ಪತ್ರಕರ್ತ ಜಿ.ಇಂದ್ರಕುಮಾರ್ ಪ್ರತಿಷ್ಠಾನ ಆಯೋಜಿಸಿದ್ದ ಜಿ.ಇಂದ್ರಕುಮಾರ್ ಅವರ ರಾಗಿ ಕುರಿತ ‘ನೆಲೆದೆಲಗ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ತಾವು ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಇಂದ್ರಕುಮಾರ್ ಸಾಂಸ್ಕೃತಿಕ ಸಂಘಟಕರಾಗಿ, ಸಂಘಸoಸ್ಥೆಗಳ ಒಡನಾಟದೊಂದಿಗೆ ಸಮಾಜಮುಖಿ ಚಿಂತನೆಗಳನ್ನು ತಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ಎಂದರು.ನೆರೆದೆಲಗ ಕೃತಿ ರಾಗಿಯನ್ನು ಕುರಿತವಿಶೇಷವಾದ ಪುಸ್ತಕ. ನಮ್ಮ ಪ್ರಮುಖ ಆಹಾರವಾದ ರಾಗಿಯ ಮಹತ್ವದ ಬಗ್ಗೆ ಕಾಳಜಿಯಿಂದ ಅಧ್ಯಯನ ಮಾಡಿ ಕೃತಿ ರಚನೆ ಮಾಡಿದ್ದಾರೆ. ರಾಗಿ ಬಗ್ಗೆ ಐತಿಹಾಸಿಕ, ಪೌರಾಣಿಕ ಘಟನೆಗಳನ್ನು ನೆನೆಸಿಕೊಂಡಿದ್ದಾರೆ. ರಾಗಿಯನ್ನು ನಮ್ಮ ಸಂಸ್ಕೃತಿಯ ಭಾಗವಾಗಿ ಕಂಡಿದ್ದಾರೆ. ರಾಗಿಯ ವೈಜ್ಞಾನಿಕ ಮಹತ್ವವನ್ನೂ ವಿವರಿಸಿದ್ದಾರೆ ಎಂದು ಹೇಳಿದರು.