ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣ: ಎ.ನರಸಿಂಹಮೂರ್ತಿ, ರಾಜ್ಯ ಸಂಚಾಲಕರು, ಸ್ಲಂ ಜನಾಂದೋಲನಾ-ಕರ್ನಾಟಕ.
ಕೊರಟಗೆರೆ ನಗರದ ಅಂಬೇಡ್ಕರ್ ಭವನದಲ್ಲಿ (22/6/2024) ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇದಿಕೆ ವತಿಯಿಂದ ತಾಲ್ಲೂಕು ಮಟ್ಟದ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಪ್ರಸ್ತಾವಿಕವಾಗಿ ಮಾತನಾಡಿದ ಎ.ನರಸಿಂಹಮೂರ್ತಿ ಅವರು ತುಮಕೂರು ಜಿಲ್ಲಾದ್ಯಂತ ಎಸ್.ಸಿ/ಎಸ್.ಟಿ ಪ್ರಕರಣಗಳು ಇತ್ಯರ್ಥವಾಗದೆ, ಹೆಚ್ಚಾಗುತ್ತಿರುವುದಕ್ಕೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣವಾಗಿದೆ ಎಂದರು.
2020-2023ರ ಕೊನೆಯವರೆಗೂ ತುಮಕೂರು ಜಿಲ್ಲಾದ್ಯಂತ 525 ಪ್ರಕರಣಗಳು ದಾಖಲಾಗಿದ್ದು, ಕಾಯಿದೆಯನ್ನು ಪರಿಹಾರಕ್ಕಷ್ಟೇ ಸೀಮಿತಗೊಳಿಸಲಾಗುತ್ತಿದೆ. 405 ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, 90 ಪ್ರಕರಣಗಳಿಗೆ ಬಿ ರಿರ್ಪೋಟ್ ಹಾಕಿದ್ದಾರೆ ಮತ್ತು ತನಿಖೆ ಹಂತದಲ್ಲಿರುವುದು 28 ಪ್ರಕರಣಗಳು. 2023ರಲ್ಲಿ 106 ಪ್ರಕರಣಗಳಾಗಿದ್ದು ಶಿಕ್ಷೆಯಾಗಿರುವುದು ಇಬ್ಬರಿಗೆ ಮಾತ್ರ. ಪರಿಶಿಷ್ಟ ಜಾತಿ ಮತ್ತು ಪಂಗಡದ ವ್ಯಕ್ತಿಗಳು ಸತ್ತರೇ, ಅತ್ಯಾಚಾರವಾದರೆ, ಥಳಿಸಿಕೊಂಡರೆ ಮಾನದಂಡಗಳ ಆಧಾರದಲ್ಲಿ ಪರಿಹಾರವನ್ನು ಸರ್ಕಾರ ನಿಗಧಿ ಮಾಡುತಿದೆಯೇ ಹೊರತು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕ್ರಮವಹಿಸುತ್ತಿಲ್ಲ. 2024 ಲೋಕಸಭಾ ಎಲೆಕ್ಷನ್ ನೀತಿ ಸಂಹಿತೆ ಕಾರಣವಾಗಿ ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆ ಮೇಲುಸ್ತುವಾರಿ ಸಮಿತಿಯ ಸಭೆಗಳನ್ನು ಮುಂದೂಡುವ ಮತ್ತು ಇಲ್ಲಿಯವರೆಗೂ ಸಭೆ ನಡೆಸಲು ಯಾವುದೇ ಕ್ರಮಕೈಗೊಳ್ಳದ ಬಗ್ಗೆ ಜಿಲ್ಲಾಡಳಿತ ಅವಲೋಕಿಸಿಕೊಳ್ಳಬೇಕಿದೆ. ಇನ್ನೂ ಅಲ್ಲಲ್ಲಿ ತಾಲ್ಲೂಕು ಮಟ್ಟದ ಸಭೆಗಳನ್ನು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ನಡೆಸಿದ್ದರು, ಅವುಗಳು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಹಾಗೆಯೇ ಪೊಲೀಸ್ ಠಾಣೆಗಳಲ್ಲಿ ಪ್ರತಿ ತಿಂಗಳು ಎಸ್.ಸಿ/ಎಸ್.ಟಿ ಕುಂದುಕೊರತೆ ಸಭೆಗಳನ್ನು ನಡೆಸಬೇಕು, ಆದರೆ ಅಲ್ಲಿ ದಲಿತ ಮುಖಂಡರುಗಳೊಟ್ಟಿಗೆ ಟೀ/ಕಾಫಿ ನೀಡುವ ಮೂಲಕ ನಾಮಕವಸ್ತೆಯ ಚರ್ಚೆ ನಡೆಸುತ್ತಿದ್ದಾರೆ. ಮೊನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿರುವಂತೆ ರಾಜ್ಯಾದ್ಯಂತ ಇನ್ನೂ ಮುಂದೆ ಎಸ್.ಸಿ/ಎಸ್.ಟಿ ದೌರ್ಜನ್ಯ ಪ್ರಕರಣಗಳಿಗಾಗಿ 33 ವಿಶೇಷ ಪೊಲೀಸ್ ಠಾಣೆಗಳಿಗೆ (ಜಿಲ್ಲಾ ನಾಗರೀಕ ಹಕ್ಕುಗಳ ಜಾರಿ ಕೋಶಗಳು ವಿಶೇಷ ಪೊಲೀಸ್ ಠಾಣೆಗಳಾಗಿ ಬದಲಾಗಲಿವೆ) ಅನುಮೋದಿಸಿರುವುದು ಸ್ವಾಗರ್ತಹವಾಗಿದ್ದು ಆದಷ್ಟು ಬೇಗನೇ ಇದು ಅಷ್ಟಾನಗೊಂಡು ಪರಿಶಿಷ್ಟ ಜನ ಸಮುದಾಯಗಳಿಗೆ ನ್ಯಾಯ ದೊರಕಿಸುವಂತೆ ಮಾಡಬೇಕಿದೆ. ಎಸ್.ಸಿ/ಎಸ್.ಟಿ ಅಟ್ರಾಸಿಟಿ ಕಾಯಿದೆ ಬಗ್ಗೆ ವ್ಯಾಪಕವಾದ ಪ್ರಚಾರ ಮತ್ತು ಜಾಗೃತಿಯ ಅಗತ್ಯತೆ ಇದ್ದು ಈ ನಿಟ್ಟಿನಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇದಿಕೆ ತುಮಕೂರು ಜಿಲ್ಲಾದ್ಯಂತ ಕಾರ್ಯಾರಂಭಿಸಿದ್ದು ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರೊಂದಿಗೆ ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ನಿಲ್ಲಲಿದೆ ಎಂದರು.
ಎಸ್.ಸಿ/ಎಸ್.ಟಿ ಜನ ಸಮುದಾಯಗಳ ಮೇಲೆ ದೌರ್ಜನ್ಯ ನಡೆದಾಗ ಸೂಕ್ತ ರೀತಿಯಲ್ಲಿ ದೂರು ದಾಖಲಿಸಬೇಕು:
ನರಸಿಂಹಪ್ಪ ಟಿ.ವಿ, ಹೈಕೋರ್ಟ್ ವಕೀಲರು, ಬೆಂಗಳೂರು.
ಪರಿಶಿಷ್ಟ ಜನ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಪ್ರಮುಖವಾದ ಕಾಯಿದೆಯೇ ಈ ಎಸ್.ಸಿ/ಎಸ್.ಟಿ ಅಟ್ರಾಸಿಟಿ ಆಕ್ಟ್-1989. ಇದನ್ನ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಪರ್ಯಾಯ ಕಾನೂನು ವೇದಿಕೆಯ ಮೂಲಕ ಸಣ್ಣ ಕೈಪಿಡಿ ಹೊರತಂದಿದ್ದೇವೆ. ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಸೇರಿದಂತೆ ಇತರೆ ಸಂಘಟನೆಗೊಳಟ್ಟಿಗೆ ಸೇರಿ ಕಾಯಿದೆಯ ಸಕಾರಾತ್ಮಕ ಅನುಷ್ಟಾನಕ್ಕಾಗಿ ಪ್ರಯತ್ನಿಸುತ್ತಿದ್ದು ಸಮಾಲೋಚನಾ ಸಭೆಗಳು, ಕಾರ್ಯಗಾರಗಳು, ಗ್ರಾಮಸಭೆಗಳನ್ನು ನಡೆಸುವ ಮೂಲಕ ವಂಚಿತ ಮತ್ತು ಧಮನಕ್ಕೊಳಗಾದ ಎಸ್.ಸಿ/ಎಸ್.ಟಿ ಸಮುದಾಯಗಳನ್ನು ತಲುಪುತ್ತಿದ್ದೆ. ಈ ಕಾಯಿದೆಯ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವ ಮೂಲಕ ನಾವು ದೌರ್ಜನ್ಯ ಪ್ರಕರಗಳು ನಡೆದಾಗ ಸೂಕ್ಷ್ಮವಾಗಿ ಗಮನಿಸಿಕೊಂಡು ದೂರು ದಾಖಲಿಸಬೇಕು. ಅವಾಚ್ಯ ಶಬ್ಧಗಳಿಂದ ಮತ್ತು ಅವು ಜಾತಿ ಸೂಚಕವಾಗಿದ್ದರೆ ಅಂತಹ ಅಂಶಗಳನ್ನು ದೂರು ನೀಡುವಾಗ ನಾವು ದಾಖಲಿಸಬೇಕು ಮತ್ತು ನಿರ್ಧಿಷ್ಟ ಸೆಕ್ಷನ್ಗಳನ್ನು ಉಲ್ಲೇಖಿಸುವ ಮೂಲಕ ನಮ್ಮ ದೂರನ್ನು ಕಟ್ಟಿಕೊಳಿಸಬೇಕು. ಹಾಗ ಮಾತ್ರ ಕೇಸ್ ನಡೆಸಲು ಸುಲಭವಾಗುತ್ತದೆ ಎನ್ನುತ್ತಾ ಅಟ್ರಾಸಿಟಿ ಕಾಯಿದೆಯ ಪ್ರಮುಖಾಂಶಗಳನ್ನು ತಿಳಿಸಿಕೊಟ್ಟರು.
ರೆಡ್ಸ್ ಸಂಸ್ಥೆಯ ರಂಗಯ್ಯ ಅವರು ಪಿಟಿಸಿಎಲ್ ಕಾಯಿದೆಯ ಬಗ್ಗೆ ಪರಿಚಯಿಸಿದರೆ, ಪರ್ಯಾಯ ಕಾನೂನು ವೇದಿಕೆಯ ಸಂಶೋಧಕರಾದ ಸಿದ್ದಾರ್ಥ್ ಜ್ಯೋಶಿ ಅವರು ಮಲಹೋರುವ ಪದ್ಧತಿ/ಕಾರ್ಮಿಕ ನೇಮಕ ನಿಷೇಧ ಕಾಯಿದೆಯ ಬಗ್ಗೆ ರಚನಾತ್ಮಕವಾಗಿ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಸಭೆಯ ನಿರೂಪಣೆಯನ್ನು ತೇಜಸ್ ಕುಮಾರ್ ಮತ್ತು ತಿರುಮಲಯ್ಯ ನಡೆಸಿದರೆ, ನಿರ್ವಹಣೆಯನ್ನು ಕೃಷ್ಣಮೂರ್ತಿ ಮತ್ತು ಮನೋಜ್ ಕುಮಾರ್ ಮಾಡಿದರು. ಹಾಗೆಯೇ ಸಭೆಯಲ್ಲಿ ಪರ್ಯಾಯ ಕಾನೂನು ವೇದಿಕೆಯ ವಕೀಲರಾದ ಮೃಧುಲಾ, ಸಂಪ್ರೀತಾ ಸೇರಿದಂತೆ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ, ಕಂಟಿಗಾನಹಳ್ಳಿ, ಅಹೋಬಲ ಅಗ್ರಹಾರ, ಕೋಳಾಲ ಹೋಬಲಿಯ ಶಿಂಗ್ರೆಡ್ಡಿ ಹಳ್ಳಿ, ಎಂ.ಗೋಲ್ಲಹಳ್ಳಿಯ ನಿವಾಸಿಗಳು ಉಪಸ್ಥಿತರಿದ್ದರು.