ತುಮಕೂರು: ದೇಶ ಅಭಿವೃದ್ಧಿ ಹೊಂದಲು, ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಲು ಮೌಲ್ಯಾಧಾರಿತ ಶಿಕ್ಷಣ ಮುಖ್ಯ. ಸಕಾರಾತ್ಮಕ ಭಾವನೆ, ಸೇವಾ ಮನೋಭಾವ, ಪ್ರಾಮಾಣಿಕತೆ ನೈತಿಕ ಬದುಕಿನ ಅಂತರಾಳ ಎಂದು ಖ್ಯಾತ ಅಂಕಣಕಾರರಾದ ನಾಡೋಜ ಎಸ್. ಷಡಕ್ಷರಿ ಹೇಳಿದರು.
ತುಮಕೂರು ವಿವಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ, ಕೌಶಲ್ಯಾಭಿವೃದ್ಧಿ ಕೇಂದ್ರ ಮತ್ತು ವಿವಿ ಕಲಾ ಕಾಲೇಜಿನ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಏನನ್ನಾದರೂ ಸಾಧಿಸುವ ಮೊದಲು ಮಾನವನಾಗಬೇಕು. ಉತ್ತುಂಗಕ್ಕೇರಿಸುವ ಕನಸುಗಳನ್ನು ಕಾಣಬೇಕು. ಕನಸುಗಳನ್ನು ನನಸು ಮಾಡಿಕೊಳ್ಳುವ ಧೈರ್ಯವಿರಬೇಕು. ನಮ್ಮ ಆಸಕ್ತಿಗನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ, ದೇಶದ ಯುವಕರಿಗೆ ಮಾನವ ನಿರ್ಮಾಣ, ನಿರ್ಮಾಣದ ಶಿಕ್ಷಣವನ್ನು ನೀಡಿದಾಗ ಮಾತ್ರ ಸದೃಢ ಭಾರತವನ್ನು ಕಟ್ಟಲು ಸಾಧ್ಯ ಎಂದರು.
ವಿವಿ ಕುಲಸಚಿವೆ ನಾಹಿದಾ ಜಾಮ್ ಜಾಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ. ಜಿ. ಬಸವರಾಜ, ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಪ್ರೊ. ಕೆ. ಜಿ. ಪರಶುರಾಮ ಉಪಸ್ಥಿತರಿದ್ದರು.