ತುಮಕೂರು- ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸಿ ಪೋಷಿಸುವಲ್ಲಿ ಶಾಸ್ತ್ರೀಯ ಕಲೆಗಳಾದ ಸಂಗೀತ ಮತ್ತು ಭರತನಾಟ್ಯ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಿದ್ದಗಂಗಾ ಮಠದ ಕಿರಿಯಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಡಾ. ಗುಬ್ಬಿ ವೀರಣ್ಣ ರಂಗಮoದಿರದಲ್ಲಿ ರೇವತಿ ನೃತ್ಯ ಕಲಾ ಮಂದಿರದ 16ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಆಚಾರ್ಯ ನೃತ್ಯೋತ್ಸವ “ನವಗ್ರಹಾನುಗ್ರಹ” ನೃತ್ಯರೂಪಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಭರತನಾಟ್ಯ ಕಲೆ ಕಲಿಸುವುದು ಅವಶ್ಯಕವಾಗಿದೆ. ಭರತನಾಟ್ಯ ಕಲೆ ಕಲಿಕೆಯಿಂದ ಸಂಸ್ಕಾರವೂ ಮೈಗೂಡುತ್ತದೆ ಎಂದರು.

ಮಕ್ಕಳಲ್ಲಿ ಇಂತಹ ಕಲೆಗಳನ್ನು ಕಲಿಸಲು ಪೋಷಕರು ಸಹ ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.
ನವಗ್ರಹಾನುಗ್ರಹ ನೃತ್ಯರೂಪಕವನ್ನು ಸಂಯೋಜಿಸಿದ ವಿದೂಷಿ ಸಹನ ಓಹಿಲೇಶ್ರವರ ಕಲಾತ್ಮಕತೆಯನ್ನು ಶ್ಲಾಘಿಸಿದ ಶ್ರೀಗಳು, ಪ್ರತಿ ನವರಾತ್ರಿಯಲ್ಲಿ ರೇವತಿ ನೃತ್ಯ ಕಲಾಮಂದಿರಕ್ಕೆ ಶಿವನ ಸೇವೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇಂತಹ ಸಂಸ್ಥೆಗೆ ಇನ್ಮೂ ಹೆಚ್ಚು ಹೆಚ್ಚು ಅವಕಾಶಗಳನ್ನು ಕಲ್ಪಿಸಿಕೊಡುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಭರತನಾಟ್ಯ ಕಲೆಯನ್ನು ಕಲಿಸುತ್ತಿರುವ ರೇವತಿ ನೃತ್ಯ ಕಲಾಮಂದಿರದ ವಿದೂಷಿ ಸಹನ ರವರ ಕಲಾಕತ್ಮಕತೆ ಹಾಗೂ ಕಾರ್ಯ ಬದ್ದತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಟ್ಯಾಚಾರ್ಯ ವಿದ್ವಾನ್ ಸಿ.ಎಂ. ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಭರತನಾಟ್ಯ ವಿದ್ಯಾರ್ಜನೆಯನ್ನು ನಿಲ್ಲಿಸದೆ ಮುಂದುವರೆಸಬೇಕು. ಭರತನಾಟ್ಯ ಕಲೆ ವಿದ್ಯಾರ್ಥಿಗಳ ದೇಹವನ್ನು ಸದೃಢಗೊಳಿಸುವ ಜತೆಗೆ ಮನಸ್ಸನ್ನು ಕೇಂದ್ರೀಕೃತವನ್ನಾಗಿಸುತ್ತದೆ ಎಂದು ಹೇಳಿದರು.
ವಿದೂಷಿ ಶೋಭ ಲೋಲನಾಥ್ ಮಾತನಾಡಿ, ವಿದೂಷಿ ಸಹನರವರ ಸಹನೆ ಹಾಗೂ ಶ್ರಮ ಇತರರಿಗೆ ಮಾದರಿಯಾಗಿದೆ. ಭರತನಾಟ್ಯ ಕಲಿಯುತ್ತಿರುವ ಮಕ್ಕಳು ಕಲಿಕೆಯನ್ನು ಅರ್ಧಕ್ಕೆ ಮೊಟಕುಗೊಳಿಸದೆ ಮುಂದುವರೆಸಬೇಕು ಎಂದು ಹೇಳಿದರು.
ರೇವತಿ ನೃತ್ಯ ಕಲಾ ಮಂದಿರದ ವಿದೂಷಿ ಸಹನ ಓಹಿಲೇಶ್ ಮಾತನಾಡಿ, ನಮ್ಮ ನೃತ್ಯ ಕಲಾಮಂದಿರ ಕಳೆದ 16 ವರ್ಷಗಳಿಂದ ಮಕ್ಕಳಿಗೆ ಭರತನಾಟ್ಯ ಕಲೆಯನ್ನು ಕಲಿಸುತ್ತಾ ಬಂದಿದೆ. ನಮ್ಮ ಕಲಾ ಮಂದಿರದ ಮಕ್ಕಳು ಉತ್ತಮ ಭರತನಾಟ್ಯ ನೃತ್ಯಗಾರ್ತಿಗಳಾಗಿ ಹೊರಹೊಮ್ಮಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ನಡೆದ ರೇವತಿ ನೃತ್ಯ ಕಲಾ ಮಂದಿರದ 16ನೇ ವರ್ಷದ ಆಚಾರ್ಯ ನೃತ್ಯೋತ್ಸವ ನೋಡುಗರ ಗಮನ ಸೆಳೆಯಿತು.
ನವಗ್ರಹಾನುಗ್ರಹ ನೃತ್ಯ ರೂಪಕದೊಂದಿಗೆ ಹಲವಾರು ಕೃತಿ ದೇವರನಾಮ, ವಚನ ಹಾಗೂ ಜನಪದ ಗೀತೆಗೆ ಕಲಾ ಮಂದಿರದ ವಿದ್ಯಾರ್ಥಿಗಳು ವಿದೂಷಿ ಸಹನ ರವರ ಸಾರಥ್ಯದಲ್ಲಿ ಹೆಜ್ಜೆ ಹಾಕಿದ್ದು ಸಭಿಕರನ್ನು ಮಂತ್ರ ಮುಗ್ದಗೊಳಿಸಿತು.
ಈ ಸಂದರ್ಭದಲ್ಲಿ ರೇವತಿ ನೃತ್ಯ ಕಲಾಮಂದಿರದ ಅಧ್ಯಕ್ಷರಾದ ಸಿದ್ದಲಿಂಗಪ್ಪ, ಪ್ರಸನ್ನಕುಮಾರ್, ರೇವತಿ ನೃತ್ಯ ಕಲಾ ಮಂದಿರದ ವಿದ್ಯಾರ್ಥಿಗಳು, ಗುಬ್ಬಿ ಶಾಖೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಸುಧಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು.



