ಇಂದು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಳ ಹಿತರಕ್ಷಣಾ ಸಮಿತಿಯ ಕಾರ್ಯಕಾರಿ ಸಭೆಯನ್ನು ಸ್ಲಂ ಭವನದಲ್ಲಿ ಹಮ್ಮಿಕೊಂಡು ಪ್ರಸಕ್ತವಾಗಿ ಇತ್ತೀಚೆಗೆ ತುಮಕೂರು ನಗರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಕೋಡಿಹಳ್ಳದ ಕುಟುಂಬಗಳಿಗೆ ಪುನರ್ವಸತಿ ಸೇರಿದಂತೆ ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸಲು ಕಾಲಾವಧಿ ವಿಸ್ತರಣೆಗೆ ಸರ್ಕಾರದ ಗಮನ ಸೆಳೆದು ಉಸ್ತುವಾರಿ ಸಚಿವರ ಗಮನಕ್ಕೆ ತಂದು ಅರ್ಹ ಫಲಾನುಭವಿಗಳ ಆಯ್ಕೆ ಸೇರಿದಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಯ 10 ರಿಂದ 15 ಕಡೆ ನಿವೇಶನ ರಹಿತರಿಗೆ ಜಾಗ ಗುರುತಿಸುವ ತೀರ್ಮಾನವನ್ನು ತುಮಕೂರು ಸ್ಲಂ ಸಮಿತಿ ಸ್ವಾಗತಿಸಿದೆ.ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಎ.ನರಸಿಂಹಮೂರ್ತಿ ಮಾತನಾಡಿ ಶಾಸಕರು ತಮ್ಮ ಎರೆಡನೇ ಅವಧಿಯ ಆಶ್ರಯ ಸಮಿತಿ ಸಭೆಯನ್ನು ಮಾಡಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿರುವುದನ್ನು
ಸ್ವಾಗತಿಸುವುದಾಗಿ ಹಾಗೂ ಸ್ಲಂ ಸಂಘಟನೆಯ ನಿರಂತರ ಹೋರಾಟದಿಂದ ನಿವೇಶನ ರಹಿತರಿಗೆ ಜಿಲ್ಲಾಡಳಿತದಿಂದ ಸರ್ಕಾರಿ ಭೂಮಿ ಹಸ್ತಾಂತರಿಸಿರುವುದನ್ನು ಸ್ವಾಗತಿಸಿದರು, 2022ರ ಸಾಲಿನಲ್ಲಿ ತುಮಕೂರು ನಗರಕ್ಕೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ 1450 ಮನೆಗಳು ಮಂಜೂರಾಗಿ ಇನ್ಸಿಟೀವ್ ಮನೆಗಳನ್ನು ಪ್ರಾರಂಭಿಸಿದ್ದು ಇದುವರೆಗೂ 503 ಕಾಮಗಾರಿಗಳು ಅಪೂರ್ಣವಾಗಿ ನಡೆಯುತ್ತಿದ್ದು ಅತಂತ್ರವಾಗಿ ಸ್ಲಂ ನಿವಾಸಿಗಳು ಇದ್ದೇವೆ. ಯೋಜನೆ ಪ್ರಾರಂಭಿಸಿದಾಗ ಎಸ್ಸಿ/ಎಸ್ಟಿಗಳಿಗೆ 10% ಹಿಂದುಳಿದ ಅಲ್ಪಸಂಖ್ಯಾತ ಮತ್ತು ಸಾಮಾನ್ಯ ಜಾತಿಗಳಿಗೆ 15% ಅಂದರೆ ಕ್ರಮವಾಗಿ 65 ಸಾವಿರ ಮತ್ತು 97 ಸಾವಿರ ಫಲಾನುಭವಿ ವಂತಿಕೆಯಾಗಿ ಪಾವತಿಸಬೇಕಿತ್ತು ಆದರೆ ಇತ್ತೀಚೆಗೆ ನಗರದ ಎಲ್ಲಾ ಸ್ಲಂ ನಿವಾಸಿಗಳಿಗೆ 1 ಲಕ್ಷ ಫಲಾನುಭವಿ ವಂತಿಕೆಯನ್ನು ಸಿ.ಎಂ ಅಧ್ಯಕ್ಷತೆಯಲ್ಲಿ ನಡೆದ ವಸತಿ ಇಲಾಖೆ ಸಭೆಯಲ್ಲಿ ತೀರ್ಮಾನಿಸಿದ್ದು 1 ಲಕ್ಷ ಫಲಾನುಭವಿ ವಂತಿಕೆಯನ್ನು ಕಡಿಮೆಗೊಳಿಸಲು ಶಾಸಕರು ಸರ್ಕಾರದ ಜೊತೆ ಮಾತನಾಡಬೇಕು, ಹಾಗೇ ಈ ಯೋಜನೆಯಲ್ಲಿ ಬಾಕಿ ಉಳಿದಿರುವ ಮನೆಗಳ ಪೈಕಿ 194 ಮನೆಗಳನ್ನು ವಾರ್ಡ್ ನಂ,1ರ ಹೊನ್ನೇನಹಳ್ಳಿ ಗ್ರಾಮದ ಸರ್ವೇ ನಂ, 44 ರಲ್ಲಿ 1.ಎಕರೆ 39 ಗುಂಟೆಯಲ್ಲಿ ವಸತಿ ಸಮುಚ್ಛಯ ನಿರ್ಮಿಸಿ ಪೌರಕಾರ್ಮಿಕರಿಗೆ ಕುಮಟ್ಟಯ್ಯ ಬಡಾವಾಣೆಯ ಅಲೆಮಾರಿಗಳಿಗೆ ಅಮಾನಿಕೆರೆ ಕೋಡಿಹಳ್ಳದ ನಿವಾಸಿಗಳಿಗೆ ವಸತಿ ನೀಡುವುದಾಗಿ ಹೇಳಿದ್ದಾರೆ, ಹಾಗೂ ಮನೆ ನಿರ್ಮಾಣದ ನಂತರ ಹಂಚಿಕೆ ಮಾಡುವುದಾಗಿ ಹೇಳಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಏಕೆಂದರೆ ಈ ಯೋಜನೆಯಲ್ಲಿ ಫಲಾನುಭವಿಗಳನ್ನು ಮೊದಲೇ ಆಯ್ಕೆ ಮಾಡಿ ಫಲಾನುಭವಿ ವಂತಿಕೆಯನ್ನು ಪಾವತಿಸಿದರೇ ಮಾತ್ರ ಮನೆಗಳ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಹಾಗೇ ಸಾರ್ವಜನಿಕರಿಂದ ನಾವೇ ಮನೆ ಕೊಡಿಸುವುದಾಗಿ ಆಮೀಷ ಹೊಡ್ಡಿ, ಹಣ ವಸೂಲಿ ಮಾಡಿ ದಿಕ್ಕು ತಪ್ಪಿಸುತ್ತಿರುವ ಹೇಳಿಕೆ ನಿಜವಾಗಿದ್ದು ಹಲವಾರು ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಮಧ್ಯವರ್ತಿಗಳು ಜನರಿಂದ ನಾವೇ ಶಾಸಕರಿಗೆ ಹೇಳಿ ಮನೆ ಕೊಡಿಸುವುದಾಗಿ ನಂಬಿಸುತ್ತಿದ್ದು ಅಂತವರ ವಿವರವನ್ನು ಸಂಘಟನೆ ನೀಡಲು ಸಿದ್ದವಿದ್ದು, ಶಾಸಕರು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಪೌರಕಾರ್ಮಿಕರ ವಸತಿ ನಿರ್ಮಾಣಕ್ಕೆ ಸರ್ಕಾರದಲ್ಲಿ ವಿಶೇಷ ಯೋಜನೆಯಿದ್ದು ಈ ಯೋಜನೆಯಲ್ಲಿ ವಸತಿಯನ್ನು ನಿರ್ಮಿಸಿಕೊಡಬೇಕು, ಇವರ ಬದಲಾಗಿ ನಿವೇಶನ ರಹಿತ ಹೋರಾಟದ ಒಂಟಿ ಮಹಿಳೆಯರಿಗೆ ಆಧ್ಯತೆ ನೀಡಲು ಶಾಸಕರು ಗಂಭೀರವಾಗಿ ಆಲೋಚಿಸಬೇಕು, ಇನ್ನೂ ಕುಮಟ್ಟಯ್ಯ ಬಡಾವಣೆಯಲ್ಲಿರುವ ಅಲೆಮಾರಿ/ಹಂದಿಜೋಗಿಗಳು ಮತ್ತು ಲಂಬಾಣಿಗಳು ಜಿ+2 ಮಾದರಿಯ ವಸತಿ ಸಮುಚ್ಛಯಗಳನ್ನು ತಿರಸ್ಕರಿಸಿದ್ದು 2017 ರಲ್ಲಿ ಅಣ್ಣೇನಹಳ್ಳಿ ಸರ್ವೇ ನಂ, 74ರಲ್ಲಿ 4 ಎಕರೆ 36ಗುಂಟೆ ಭೂಮಿಯನ್ನು ಮಂಜೂರು ಮಾಡಿದ್ದು ಈ ಭೂಮಿಯನ್ನು ವಾಸಿಸಲು ಯೋಗ್ಯಗೊಳಿಸಿದ್ದಲ್ಲಿ ಇಲ್ಲಿನ ಜನರು ಪುನರ್ವಸತಿಗೊಳ್ಳಲು ಒಪ್ಪಿರುತ್ತಾರೆ. ಇನ್ನು ದಿಬ್ಬೂರು ದೇರಾಜ್ ಅರಸು ಬಡಾವಣೆಯ 1200 ಮನೆಗಳ ಫಲಾನುಭವಿಗಳಿಗೆ ಹಂಚಿಕೆ ಪತ್ರ ನೀಡಿ ಅಗತ್ಯವಿರುವ ನಾಗರೀಕ ಸೌಲಭ್ಯಗಳನ್ನು ಮಾಡಬೇಕು, ಅನರ್ಹರ ಬಗ್ಗೆ ತನಿಖೆ ಮಾಡುವ ಆಯುಕ್ತರ ಹೇಳಿಕೆಯನ್ನು ಸ್ವಾಗತಿಸಿದ್ದು ನಗರಪಾಲಿಕೆ ತುರ್ತಾಗಿ ಹಸ್ತಾಂತರಿಸಿಕೊಂಡು ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಕಣ್ಣನ್, ಶಂಕರಯ್ಯ, ಅರುಣ್, ಜಾಬೀರ್ಖಾನ್, ತಿರುಮಲಯ್ಯ, ಮೋಹನ್, ರಂಗನಾಥ್, ಪುಟ್ಟರಾಜು, ಧನಂಜಯ್, ಸಾವಿತ್ರಿಬಾಪುಲೆ ಮಹಿಳಾ ಘಟಕದ ಅನುಪಮಾ, ಶಾರದಮ್ಮ, ಗಂಗಾ, ಗುಲ್ನಾಜ್ ಕೋಡಿಹಳ್ಳ ಶಾಖೆಯ ಗಣೇಶ್, ಅಶ್ವತ್ ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಸುಧಾ, ಪೂರ್ಣಿಮಾ, ಹನುಮಕ್ಕ ಬಾಬು, ಧನಂಜಯ್, ಮೋಹನ್ ಟಿ.ಆರ್ ಮುಂತಾದವರು ಪಾಲ್ಗೊಂಡಿದ್ದರು.