ಮೂಲ ಕಾಂಗ್ರೆಸಿಗರನ್ನು ನಿರ್ಲಕ್ಷಿಸಲಾಗಿದೆಂದು ಬೇಸತ್ತು ರಾಜೀನಾಮೆ ನೀಡಲು ಮುಂದಾಗಿದ್ದ ಎಸ್.ಟಿ.ಶ್ರೀನಿವಾಸ್ರವರನ್ನು ಮನವೊಲಿಸುವಲ್ಲಿ ಯಶಸ್ವಿಯಾದ ಜಿಲ್ಲಾ ಕಾಂಗ್ರೆಸ್ ಕಮಿಟಿ
ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಈ ಬಾರಿ ೧೩೬ ಸ್ಥಾನ ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಕಾಂಗ್ರೆಸ್ ಪಕ್ಷದ ಗೆಲುವಿಗೆ ಜಿಲ್ಲೆ, ತಾಲೂಕು, ಹೋಬಳಿ ಸೇರಿದಂತೆ ಬೂತ್ ಮಟ್ಟದ ಕಾರ್ಯಕರ್ತರುಗಳ ಅಪಾರವಾದ ಶ್ರಮವಿದೆ ಈ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಂಚೂಣಿಗೆ ತರುವಲ್ಲಿ ಅನೇಕ ಕಾರ್ಯಕರ್ತರು ಶ್ರಮಿಸಿದ್ದಾರೆ. ಗ್ರಾಮಾಂತರದಲ್ಲಿ ಹಲವಾರು ಕಾರ್ಯಕರ್ತರನ್ನ ಸಂಘಟಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕೊಡಿಸುವುದಾಗಿ ಭರವಸೆಯನ್ನು ನಾನು ನೀಡಿಕೊಂಡು ಬಂದಿದ್ದೆ, ಅದರಂತೆ ನನ್ನ ಅಪಾರ ಕಾರ್ಯಕರ್ತರು ಸಹ ಒಂದೊಳ್ಳೆ ಕೆಲಸವನ್ನು ಮಾಡಿದ್ದಾರೆ. ಆದರೆ ಇತ್ತೀಚಿಗೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬಂದಿರುವ ನನ್ನಂತಹ ಹಲವರು ನಿಷ್ಠಾವಂತ ಕಾರ್ಯಕರ್ತರುಗಳಿಗೆ ತೀವ್ರ ಅನ್ಯಾಯವಾಗಿದೆಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದರಲ್ಲದೆ ಇತ್ತೀಚೆಗೆ ಪಕ್ಷಕ್ಕೆ ವಲಸೆ ಬಂದವರಿಗೆ ಮಾತ್ರ ಮಣೆಯನ್ನು ಹಾಕುತ್ತಿರುವುದು ನಮ್ಮಗಳಿಗೆ ಬೇಸರ ಮೂಡಿಸಿದೆ ಎಂದು ತಮ್ಮ ಆಕ್ರೋಷವನ್ನು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಶ್ರೀನಿವಾಸ್ ವ್ಯಕ್ತಪಡಿಸಿದರು.
ತಮ್ಮ ನೋವನ್ನು ಪತ್ರಿಕಾ ಮಿತ್ರರೊಂದಿಗೆ ಹಂಚಿಕೊಂಡ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ತಮ್ಮ ರಾಜೀನಾಮೆಯನ್ನು ನೀಡಲು ಮುಂದಾದರು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಗೌಡ, ಲೋಕಸಭಾ ಸಂಸದ ಅಭ್ಯರ್ಥಿ ಆಕಾಂಕ್ಷಿಯಾದ ಮುರಳೀಧರ ಹಾಲಪ್ಪ, ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಅತೀಖ್ ಅಹಮ್ಮದ್ ಕೆಪಿಸಿಸಿ ಚುನಾವಣಾ ವೀಕ್ಷಕರು ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಎಸ್.ಟಿ.ಶ್ರೀನಿವಾಸ್ರವರೊಂದಿಗೆ ಪಕ್ಷದ ಕಛೇರಿಯಲ್ಲಿ ಚರ್ಚೆ ಮಾಡಿ ಒಂದು ವಾರಗಳ ಕಾಲವಕಾಶವನ್ನು ನಮಗೆ ನೀಡಿ ನಿಮ್ಮ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ.
ನಂತರ ಸುದ್ಧಿಗಾರರೊಂದಿಗೆ ಎಸ್.ಟಿ.ಶ್ರೀನಿವಾಸ್ರವರು ಮಾತನಾಡಿ ನನ್ನ ನೋವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಹಿರಿಯ ನಾಯಕರೊಂದಿಗೆ ಇಂದು ಪಕ್ಷದ ಕಛೇರಿಯೊಳಗೆ ಮಾತನಾಡಿದ್ದೇನೆ, ನಾನು ಮೂಲ ಕಾಂಗ್ರೆಸಿಗರ ಹಾಗೂ ಪಕ್ಷಕ್ಕಾಗಿ ಸತತ ಹತ್ತಾರು ವರ್ಷಗಳಿಂದ ಕೆಲಸ ಮಾಡಿರುವವರ ಪಟ್ಟಿಯೊಂದನ್ನು ನೀಡಿದ್ದೇನೆ, ಅದನ್ನು ಶಿಫಾರಸ್ಸು ಮಾಡಿ ಅವರುಗಳಿಗೆ ಸೂಕ್ತ ಸ್ಥಾನಮಾನವನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದೇನೆ, ಅದನ್ನು ಮುಂದಿನ ಒಂದು ವಾರದೊಳಗೆ ಈಡೇರಿಸುವುದಾಗಿ ಭರವಸೆಯನ್ನು ನೀಡಿದ್ದಾರೆ, ನೀಡಿರುವ ಭರವಸೆಯನ್ನು ಈಡೇರಿಸದಿದ್ದರೆ ನಾನು ಸೇರಿದಂತೆ ಹಲವಾರು ನನ್ನ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆಯನ್ನು ನೀಡುವುದು ಶತಃ ಸಿದ್ಧ ಎಂದು ಪತ್ರಕರ್ತರೊಂದಿಗೆ ಮಾತನಾಡಿದರು.