ಆಶಾ ಕಾರ್ಯಕರ್ತೆಯರಿಗೆ ಈಗ ಕಳೆದ ಕೆಲ ದಿನಗಳಿಂದ ಮೊಬೈಲ್ನಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಗಳ ಈ-ಸಮೀಕ್ಷೆ ಮಾಡಲು ಆಶಾಗಳಿಗೆ ತರಬೇತಿ ನೀಡಿ, ಮೊಬೈಲ್ ಆ್ಯಪ್ ಮೂಲಕ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ. ಆದರೆ ಆಶಾಗಳಿಗೆ ಮೊಬೈಲ್ ಮತ್ತು ಡಾಟಾ ನೀಡದೇ ಇರುವುದರಿಂದ ಮತ್ತು ತಂಡವಾಗಿ ಕೆಲಸ ಮಾಡಿಸದೇ ಒಂಟಿಯಾಗಿ ಆಶಾ ಕಾರ್ಯಕರ್ತೆಯರೇ ಸಮೀಕ್ಷೆ ಮಾಡಲು ಒತ್ತಡ ಹೇರಲಾಗುತ್ತಿದೆ ಮತ್ತು ಕೆಲವೆಡೆ ಗೌರವಧನ/ಪ್ರೋತ್ಸಾಹಧನ ಕೊಡುವುದಿಲ್ಲವೆಂದು ಬೆದರಿಕೆ ಹಾಕಲಾಗುತ್ತಿದೆ. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊರಟೆಗೆರೆ ತಾಲೂಕು ಸಮಿತಿಯ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕೊರಟಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಆಸ್ಪತ್ರೆಯವರೆಗೂ ಮೆರವಣಿಗೆಯಲ್ಲಿ ಸಾಗಿ ಪ್ರತಿಭಟನೆ ನಡೆಸಿದರು. ನೆರೆದ ಆಶಾ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಎಸ್.ಎನ್.ಸ್ವಾಮಿ, ಈ-ಸಮೀಕ್ಸೆ ಮಾಡಿ ಗಣಕೀರಣ ಮಾಡಲು ಅಗತ್ಯವಾದ ಅತ್ಯಾಧುನಿಕ ಮೊಬೈಲ್ ಮತ್ತು ಉತ್ತಮ ಡಾಟಾಪ್ಯಾಕ್ ಅಗತ್ಯವಿದ್ದು, ಅದಕ್ಕೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ಅತ್ಯಲ್ಪ ಮೊತ್ತದ ಗೌರವಧನವನ್ನೇ ಕಳೆದ ನಾಲ್ಕು ತಿಂಗಳಿAದ ಬಾಕಿ ಉಳಿಸಿಕೊಂಡಿದೆ. ಆದರೆ ತಿಂಗಳುಗಟ್ಟಲೇ ಈ-ಸಮೀಕ್ಷೆ ಮಾಡಿ ಕೇವಲ ರೂ.೫೦೦ ಮಾತ್ರ ಗೌರವಧನಕ್ಕಾಗಿ ಬಡ ಆಶಾ ಕಾರ್ಯಕರ್ತೆಯರನ್ನು ಸಾವಿರಾರು ರೂಪಾಯಿ ಖರ್ಚು ಮಾಡಿಸಲು ಒತ್ತಡ ಹೇರುತ್ತಿರುವ ಆರೋಗ್ಯ ಇಲಾಖೆಯ ನಡೆ ಅತ್ಯಂತ ಖಂಡನಾರ್ಹ. ಜೊತೆಗೆ ಆಶಾ ಕಾರ್ಯಕರ್ತೆಯರನ್ನು ಎನ್ಎಚ್ಎಮ್ ನಿಗದಿಪಡಿಸಿರುವ ಕೆಲಸಗಳನ್ನು ಹೊರತುಪಡಿಸಿಯೂ ಹಲವಾರು ಕಾರ್ಯಕ್ರಮಗಳಿಗೆ, ಕೆಲಸಗಳಿಗೆ, ಸರ್ವೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಒಂದು ಕಡೆ ಇವುಗಳಿಂದ ಆದಾಯಕ್ಕಿಂತ ವಿಪರೀತ ಖರ್ಚುಗಳಾಗುತ್ತಿದೆ; ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಈ-ಸಮೀಕ್ಷೆಯ ಗಣಕೀಕರಣದ ಕೆಲಸವೂ ಅಗಾಧವಾಗಿದ್ದು, ಇದರಿಂದ ಆಶಾ ಕಾರ್ಯಕರ್ತೆಯರು ಕುಟುಂಬದ ಕಡೆಗೆ ಗಮನ ಹರಿಸಲಾಗುತ್ತಿಲ್ಲ. ಅದರಿಂದ ಕುಟುಂಬದಲ್ಲಿ ವ್ಯತಿರಿಕ್ತ ಪರಿಣಾಮಗಳಾಗುತ್ತಿವೆ. ಆದ್ದರಿಂದ ಈ-ಸಮೀಕ್ಸೆ ನಡೆಸಲು ಅಗತ್ಯವಾದ ಸಲಕರಣೆಗಳನ್ನು (ಮೊಬೈಲ್, ಡಾಟಾಪ್ಯಾಕ್) ಒದಗಿಸಬೇಕು, ಒಂದು ತಂಡವಾಗಿ ಕೆಲಸವಾಗಬೇಕು ಮತ್ತು ಸೂಕ್ತ ಸಂಭಾವನೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ನಾಯಕರಲ್ಲಿ ಒಬ್ಬರಾದ ಟಿ.ಇ.ಅಶ್ವಿನಿ ಮಾತನಾಡಿ, ಈ-ಸಮೀಕ್ಷೆ ಮಾಡದಿದ್ದರೆ, ಕಫ ತರದಿದ್ದರೆ ಗೌರವಧನವನ್ನು ನಿಲ್ಲಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಅವರು ಮುಂದುವರೆದು, ಎಷ್ಟೋ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಇಲ್ಲ; ಇರುವ ಸ್ಮಾರ್ಟ್ ಫೋನ್ಗಳು ಸಾಕಾಗುವುದಿಲ್ಲ; ನೆಟ್ವರ್ಕ್ ಸಮಸ್ಯೆಯಿದೆ ಮತ್ತು ಸಮೀಕ್ಸೆಯ ಬಗ್ಗೆ ಜನರಿಗೆ ವಿರೋಧವಿದೆ. ಇದನ್ನೆಲ್ಲಾ ಬಗೆಹರಿಸದೇ ಆಶಾ ಕಾರ್ಯಕರ್ತೆಯರು ಈ ಸಮೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ತಾಲೂಕು ಕಾರ್ಯದರ್ಶಿಗಳಾದ ಯಶೋದ ಮಾತನಾಡಿ, ನಮ್ಮನ್ನು ಮನೆಗೆಲಸದ ಜೊತೆಗೆ ಆಶಾ ಕೆಲಸಗಳನ್ನು ಗೌರವಧನಕ್ಕಾಗಿ ಕೆಲಸ ಮಾಡಬೇಕೆಂದು ತಿಳಿಸಿ ಸೇರಿಸಿಕೊಂಡು, ಈಗ ಹಗಲು ರಾತ್ರಿ ದುಡಿಯುವಂತೆ ಮಾಡುತ್ತಿದ್ದಾರೆ. ಹೊರಗಡೆ ಕೂಲಿ ಮಾಡಿದರೆ ದಿನಕ್ಕೆ ೩೦೦-೪೦೦ ರೂ. ಸಿಗುತ್ತದೆ. ಆದರೆ ಈ ಸಮೀಕ್ಷೆಗೆ ಕೇವಲ ರೂ.೫೦೦. ನಮಗೆ ಕುಟುಂಬದ ಕಡೆಯೂ ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಬಹಳ ಒತ್ತಡವಾಗುತ್ತಿದೆ ಎಂದರು.
ಆಶಾ ಕಾರ್ಯಕರ್ತೆಯರು ಇತರೆ ಸಿಬ್ಬಂದಿಗಳೊAದಿಗೆ ಸೇರಿ ಸರ್ವೇ ಮಾಡಲು ವ್ಯವಸ್ಥೆ ಮಾಡಬೇಕು; ಆಧುನಿ ಮೊಬೈಲ್- ನೆಟ್ಪ್ಯಾಕ್ ನೀಡಿ ಸರ್ವೆ ಮಾಡಿಸಬೇಕು; ಆಶಾ ಕಾರ್ಯಕರ್ತೆಯರಲ್ಲಿ ಯಾರಿಗೆ ಮೊಬೈಲ್ ಬಳಸಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು; ಜನರಲ್ಲಿ ಈ-ಸಮೀಕ್ಷೆ ಬಗ್ಗೆ ಅರಿವು ಮೂಡಿಸಬೇಕು, ಆಶಾಗಳು ಮನೆ-ಮನೆಗೆ ಬಂದಾಗ ಮಾಹಿತಿ ನೀಡಬೇಕೆನ್ನುವ ತಿಳುವಳಿಕೆಗಾಗಿ ಮತ್ತು ಜನರಲ್ಲಿ ಬರುವ ಆತಂಕ ನಿವಾರಣೆಗೆ ವ್ಯಾಪಕ ಪ್ರಚಾರ ಮಾಡಿ ಪೂರಕ ವಾತಾವರಣ ಸೃಷ್ಟಿ ಮಾಡಬೇಕು ಮತ್ತು ಸೂಕ್ತ ಸಂಭಾವನೆಯನ್ನು ಕೊಡಬೇಕೆಂಬ ಹಕ್ಕೊತ್ತಾಯಗಳಿರುವ ಮನವಿ ಪತ್ರವನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ನೀಡಲಾಯಿತು.
ಸಮೀಕ್ಷೆ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯ

Leave a comment
Leave a comment