ತುಮಕೂರು : ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಇಂದು ಜಿಲ್ಲಾ ಕಛೇರಿಯಲ್ಲಿ ವಿಚಾರವಾದಿ ಜ್ಯೋತಿಬಾ ಪುಲೆ ಮತ್ತು ಫಾತಿಮಾ ಶೇಖ್ ರವರುಗಳ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂಬಂಧ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ಮಾತನಾಡುತ್ತಾ ಮಹಾನ್ ವಿಚಾರವಾದಿ ಜ್ಯೋತಿಬಾ ಪುಲೆ ಸಮಾಜ ಪರಿವರ್ತನಾ ಕಾರ್ಯಕ್ಕೆ ತಮ್ಮ ಮಡದಿಗೆ ಶಿಕ್ಷಣ ಕೊಟ್ಟು ಶೂದ್ರಾತಿಶೂದ್ರರ ಮಕ್ಕಳಿಗೆ ಅದರಲ್ಲೂ ಬಾಲಕಿಯರಿಗಾಗಿ ಹಲವು ಶಾಲೆಗಳನ್ನು ಆರಂಭಿಸಿದಂತಹ ವ್ಯಕ್ತಿಗಳಾಗಿದ್ದವರು, ಶಾಲೆಗೆ ಶಿಕ್ಷಕರು ಯಾರೂ ಬಾರದಿದ್ದಾಗ ಫುಲೆ ತಮ್ಮ ಮಡದಿ ಸಾವಿತ್ರಿ ಬಾಯಿ ಪುಲೆಗೆ ಪಾಠ ಹೇಳಿಕೊಡುವ ಮೂಲಕ ಶಿಕ್ಷಕ ಸೇವೆ ಮಾಡಲು ಮಾರ್ಗದರ್ಶನ ಮತ್ತು ಸಹಾಯ ಮಾಡುತ್ತಾರೆ. ಫುಲೆ ಅವರ ಸಾಮಾಜಿಕ ಪರಿವರ್ತನಾ ಕಾರ್ಯಕ್ಕೆ ಶಿಕ್ಷಕಿ ಸಾವಿತ್ರಿಬಾಯಿ ಪುರೋಹಿತಶಾಹಿಗಳು ಕೊಡುವ ಅವಮಾನ ಸಂಕಟಗಳನ್ನು ಧೈರ್ಯದಿಂದ ಎದುರಿಸಿ ಅಕ್ಷರ ಕ್ರಾಂತಿ ಮಾಡಿದಂತಹ ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿ ರೂಪುಗೊಂಡಂತಹವರು ಸಾವಿತ್ರಿ ಬಾಯಿ ಪುಲೆ ಅವರ ಶೈಕ್ಷಣಿಕ ಕೊಡುಗೆ ಅಪಾರ ಎಂದು ತಿಳಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿತ್ರಿಭಾಯಿ ಫುಲೆ ರವರ ಜನ್ಮದಿನಾಚರಣೆಯ ದಿನವನ್ನು ರಾಷ್ಟ್ರೀಯ ಮಹಿಳಾ ಶಿಕ್ಷಣ ದಿವಸ್ ಎಂದು ಘೋಷಿಸಿ ಆಚರಿಸುವಂತೆ ಆಗಬೇಕಾಗಿದೆಂದು ತಿಳಿಸಿದರು.
ಸಾವಿತ್ರಿಭಾಯಿ ಪುಲೆ ರವರ ಸ್ನೇಹಿತೆಯಾದಂತಹ ಫಾತೀಮ ಶೇಖ್ ರವರು ಸಹ ತಮಗೆ ತಿಳಿದ ವಿದ್ಯೆಯನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳಿಗೆ ಮತ್ತು ದಲಿತ ಮಕ್ಕಳಿಗೆ ಮನೆ ಪಾಠ ಹೇಳಿಕೊಡುವುದರ ಮೂಲಕ ನಿಸ್ವಾರ್ಥ ಸೇವೆಯನ್ನು ಮಾಡಿ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ ಮಹಾನ್ ಚೇತನರು ಅವರ ಹುಟ್ಟಿದಹಬ್ಬವನ್ನು ನಾವು ಇಂದು ಆಚರಿಸುತ್ತಿರುವುದಕ್ಕೆ ಹೆಮ್ಮೆಯೆನ್ನಿಸುತ್ತದೆ ಎಂದು ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಇಲಾಸ್ ಅಹಮದ್ ರವರು ನುಡಿದರು.
ಶಿಕ್ಷಣದ ಮುಖಾಂತರ ಮಹಿಳೆಯರಲ್ಲಿ ತಮಗಾಗುವ ಅನ್ಯಾಯವನ್ನು ತಿಳಿಸಿಕೊಟ್ಟು ಮಹಿಳಾ ಸಬಲೀಕರಣಕ್ಕೆ ಜೀವನದುದ್ದಕ್ಕೂ ನಿಸ್ವಾರ್ಥ ಮನೋಭಾವದಿಂದ ಪರೋಪಕಾರಿ ಕಾರ್ಯ ಮಾಡಿದ ಮಹಾತಾಯಂದಿರಾದ ಸಾವಿತ್ರಿಭಾಯಿ ಫುಲೆ ಮತ್ತು ಫಾತೀಮ ಶೇಖ್ ರವರುಗಳು ಅಸಾಧ್ಯ ಅವಮಾನಗಳನ್ನು ಸಹಿಸಿ ದೀನ ದಲಿತರಿಗೆ ಶಿಕ್ಷಣ ಕೊಡಲು ಟೊಂಕಕಟ್ಟಿ ನಿಂತವರು. ಮೂಢನಂಬಿಕಗಳ ಆಚರಣೆಯಲ್ಲಿದ್ದಂತಹ ಸಂದರ್ಭದಲ್ಲಿ ಸಮಾಜವನ್ನು ಎದುರಿಸಿ, ಸರ್ವರಿಗೂ ಮಾದರಿಯಾಗುವಂತಹ ಕೆಲಸ ಮಾಡಿರುವ ಇವರುಗಳ ಜನ್ಮದಿನ ಆಚರಣೆಯು ಇಂದಿನ ಪೀಳಿಗೆಗೆ ಮಾದರಿಯಾಗಿದೆಂದು ಪತ್ರಕರ್ತರು ಹಾಗೂ ತುಮಕೂರು ಉಪ-ವಿಭಾಗ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಯೋಗೀಶ್ ಮೆಳೇಕಲ್ಲಹಳ್ಳಿರವರು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಮತ್ತು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ಎಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎನ್, ಅಲ್ಪಸಂಖ್ಯಾತರ ಯುವ ಘಟಕದ ಜಿಲ್ಲಾಧ್ಯಕ್ಷರಾದ ಮೋಯಿನ್ ಅಹಮ್ಮದ್, ನಗರಾಧ್ಯಕ್ಷರಾದ ದಿಬ್ಬೂರು ಶ್ರೀನಿವಾಸ್, ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಗೌಸ್ಪೀರ್ ಸಾಬ್, ಮುಖಂಡರುಗಳಾದ ಮಂಜುನಾಥ್, ನಿರಂಜನ್, ಟಿ.ಎನ್.ನರಸಿಂಹಮೂರ್ತಿ, ಪುರದಕಟ್ಟೆ ಮಂಜು, ಗಂಗಾಧರ್ ಜಿ.ಆರ್, ಕಿರಣ್ ವೈ.ಎಸ್., ರಂಗಸ್ವಾಮಯ್ಯ ಹಾಗೂ ಇತರರು ಉಪಸ್ಥಿತರಿದ್ದರು.



