ಆಧುನಿಕ ಡ್ಯಾನ್ಸ್ನ ಭರಾಟೆಯಲ್ಲಿ ಪ್ರಾಚೀನ ಭಾರತೀಯ ನಾಟ್ಯಪರಂಪರೆಗಳ ಜನಪ್ರಿಯತೆ ಕಡಿಮೆಯಾಗುತ್ತಿದೆಯೇನೋ ಎನ್ನಿಸುವಂತಹ ಕಾಲಘಟ್ಟದಲ್ಲಿ ನಾಟ್ಯ, ಸಂಗೀತ, ನಾಟಕ ಮುಂತಾದ ದೃಶ್ಯ ಕಲೆಗಳು ಬಹಳ ಪ್ರಭಾವಶಾಲಿ ಮಾಧ್ಯಮಗಳಾಗಿ ರೂಪುಗೊಳ್ಳುತ್ತಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಮನೋರಂಜನೆಯನ್ನಷ್ಟೆ ಅಲ್ಲದೆ, ಲೋಕಕ್ಕೆ ಶಿಕ್ಷಣವನ್ನು ನೀಡುವಲ್ಲೂ ಮತ್ತು ನಮ್ಮ ಸಂಸ್ಕೃತಿ ಪ್ರಸಾರದಲ್ಲೂ ಮುಖ್ಯಪಾತ್ರ ವಹಿಸಬಲ್ಲವು ಎಂದು ಕನ್ನಡ ಚಲನಚಿತ್ರ ಸಾಹಿತಿಗಳಾದ ವಿ. ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.

ನಗರದ ನಾಗರಭಾವಿಯಲ್ಲಿರುವ ಕಲಾ ಗ್ರಾಮದಲ್ಲಿ ಇಂದು ಭಾನುವಾರದಂದು ನಡೆದ ವಿದುಷಿ ವರ್ಷ ರವಿಪ್ರಕಾಶ್ ಅವರ ನೇತೃತ್ವದ ಸ್ವರವಿಕಲಾ ಕೇಂದ್ರದ ಕಲರವ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆಗೆ ಪ್ರೊತ್ಸಾಹ ಕೊಡುವ ಮೂಲಕ ಕಲಾಭಿವೃದ್ಧಿಯು ಸಾಧ್ಯವಾಗುತ್ತದೆ. ಬಾಲ್ಯದಲ್ಲೆಯೇ ಸಾಹಿತ್ಯಕ್ಕೆ ತಕ್ಕಂತೆ ಭಾವನೆಯನ್ನು ಅಭಿವ್ಯಕ್ತ ಪಡಿಸಿ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿ ಮನರಂಜನೆಯ ಜೊತೆಗೆ ಉತ್ತಮ ಸಂದೇಶವನ್ನು ಪ್ರೇಕ್ಷಕರಿಗೆ, ಸಮಾಜಕ್ಕೆ ನೀಡಬಹುದು ಎಂದು ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಾದ ಡಾ. ಧರಣಿ ದೇವಿ ಮಾಲಗತ್ತಿ ಮಾತನಾಡಿ, ಭರತನಾಟ್ಯ ಇದು ಇಡೀ ವಿಶ್ವವನ್ನು ಆಕರ್ಷಿಸುತ್ತಿರುವ ಹೆಮ್ಮೆಯ ಕಲೆಯಾಗಿದೆ. ಭಾರತೀಯ ನಾಟ್ಯವು ಮನೋರಂಜನೆಗೆ ಮಾತ್ರ ಸೀಮಿತವಾಗದೆ ಜ್ಞಾನದ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಮಕ್ಕಳ ನಡೆಸಿಕೊಟ್ಟ ಕಾರ್ಯಕ್ರಮ ಯೋಗ ನೃತ್ಯವೋ, ನೃತ್ಯ ಯೋಗವೋ, ಇದನ್ನು ನೋಡುವುದು ನಮ್ಮ ಯೋಗವೋ ಎಂದು ಸಂತೋಷ ವ್ಯಕ್ತಪಡಿಸಿದರು.
ತುಮಕೂರಿನ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕನ್ನಿಕಾ ಪರಮೇಶ್ವರಿ ಅವರು ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನಸ್ಸಿಗೆ ಹಿತಾನುಭವವಾಗುತ್ತವೆ. ಉದಯೋನ್ಮುಖ ಭರತನಾಟ್ಯ ಕಲಾವಿದರು ಅನೇಕರು ನಮ್ಮಲ್ಲಿದ್ದಾರೆ. ಆ ಪ್ರತಿಭೆಯನ್ನು ಇನ್ನೂ ಎತ್ತರಕ್ಕೆ ಬೆಳೆಸುವ ಕೆಲಸವಾಗಬೇಕು. ಸ್ವರವಿ ಕಲಾ ಕೇಂದ್ರ ಅಂತಹ ಪ್ರತಿಭೆಗಳಿಗೆ ವೇದಿಕೆ ಕೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿಪ್ರದರ್ಶನ ನೀಡಿ ರಾಜ್ಯಕ್ಕೆ ಹೆಸರು ತನ್ನಿ ಎಂದು ಹಾರೈಸಿದರು.
ಬೆಂಗಳೂರು ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕರಾದ ಡಾ. ಶಿವಕುಮಾರ, ತುಮಕೂರಿನ ಶ್ರೀ ಸಿದ್ದಾರ್ಥ ಇಂಜಿನಿಯರಿoಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್.ಎಸ್.ರವಿಪ್ರಕಾಶ, ಭರತನಾಟ್ಯ ಕಲಾವಿದರಾದ ಸೂರ್ಯರಾವ್, ಮಂಗಳ ದೊಡ್ಡಮನಿ,ಸ್ವರವಿ ಕಲಾ ಕೇಂದ್ರದ ಕಾರ್ಯದರ್ಶಿ ಶ್ರೀಮತಿ ಸ್ವರ್ಣಲತಾ, ಖಜಾಂಚಿ ಸುಹಾಸ್ ಅವರು ಕಾರ್ಯಕ್ರಮದಲ್ಲಿದ್ದರು. ಸ್ವರವಿ ಕಲಾ ಕೇಂದ್ರದ ಅಧ್ಯಕ್ಷರಾದ ವಿದುಷಿ ವರ್ಷ ರವಿಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೆ ಮೆರಗು ನೀಡುವಂತೆ, ಧೂಪರಾತಿ ಎಂಬ ನೃತ್ಯವು ಅತೀ ಸುಂದರವಾಗಿ ಮೂಡಿಬಂದಿತು. ಏಳರಿಂದ ಹನ್ನೊಂದು ವರ್ಷದ ಮಕ್ಕಳು, ಅಚುಕಟ್ಟಾಗಿ, ತಲೆಯ ಮೇಲೆ ನೀರಿನ ಚುಂಬು, ಅದರಮೇಲೆ ದೀಪಗಳನ್ನು ಹಿಡಿದು, ನೃತ್ಯ ಮಾಡಿ, ಎಲ್ಲರ ಮನ ಗೆದ್ದರು. ಕೃಷ್ಣನ ನಾನಾ ಕಲಾಪಗಳನ್ನು ಭರತನಾಟ್ಯದ ಮೂಲಕ ತೋರಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 6 ವರ್ಷದಿಂದ 47 ವರ್ಷದ ವರೆಗೆ ಇರುವಂತಹ ಸುಮಾರು 100 ವಿದ್ಯಾರ್ಥಿಗಳು, ಭರತನಾಟ್ಯ ಮತ್ತು ಸುಗಮ ಸಂಗೀತವನ್ನು ಅಚುಕಟ್ಟಾಗಿ ಪ್ರದರ್ಶಿಸಿದರು. ನೃತ್ಯ ಗುರು ವಿದುಷಿ. ವರ್ಷ ರವಿಪ್ರಕಾಶರವರ ಶಿಕ್ಷಣಾ ಶೈಲಿಯನ್ನು ನೆರೆದಿದ್ದ ಪ್ರೇಕ್ಷಕರೆಲ್ಲರೂ ಶ್ಲಾಘಿಸಿದರು.