ತುಮಕೂರು: ಅಪ್ರಾಪ್ತ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಪೋಕ್ಸೋ ಕಾಯ್ದೆ ಕುರಿತು ಪ್ರೌಢಾವಸ್ಥೆಯ ಮಕ್ಕಳಿಗೆ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನೂರುನ್ನಿಸಾ ಅವರು ಹೇಳಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾ ವಿದ್ಯಾರ್ಥಿಗಳಿಗಾಗಿ ಬುಧವಾರ ಪೋಕ್ಸೋ ಕಾಯ್ದೆ ಹಾಗೂ ಮಹಿಳಾ ಸಂರಕ್ಷಣೆ ಬಗ್ಗೆ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಪ್ರತಿಯೊಬ್ಬರೂ ಈ ನೆಲದ ಕಾನೂನನ್ನು ಗೌರವಿಸಬೇಕು. ನಾವು ಕಾನೂನು ರಕ್ಷಣೆ ಮಾಡಿದರೆ ಕಾನೂನು ನಮ್ಮನ್ನು ರಕ್ಷಣೆ ಮಾಡುತ್ತದೆ. ಕಾನೂನು ಅರಿವು ಇಲ್ಲದಿದ್ದರೆ ಅಪರಾಧ ಪ್ರಕರಣಗಳು ಹೆಚ್ಚುತ್ತವೆ ಎಂದರು.
ಹದಿನೆಂಟು ವರ್ಷ ವಯೋಮಿತಿಯೊಳಗಿನ ಯಾವುದೇ ಮಕ್ಕಳನ್ನು ಅಪ್ರಾಪ್ತ ವಯಸ್ಸಿನವರೆಂದು ಪರಿಗಣಿಸಲಾಗುತ್ತಿದೆ. ಪೋಕ್ಸೋ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. ಇಂಥ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಅಕ್ಷಮ್ಯ ಅಪರಾಧ. ಪೋಕ್ಸೋ ಕಾಯ್ದೆಯಡಿ ಯಾವುದೇ ವ್ಯಕ್ತಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಸಾಬೀತಾದರೆ ಅಂಥ ಅಪರಾಧಿಗೆ ೨೦ ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದರು.
ಸರ್ಕಾರಿ ಶಾಲೆ ಎಂಬ ಕೀಳರಿಮೆಯನ್ನು ಮಕ್ಕಳು ಹಾಗೂ ಪೋಷಕರು ಬಿಡಬೇಕು. ಇಂದು ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಿಂತಲೂ ಕಡಿಮೆ ಇಲ್ಲದಂತೆ ಉತ್ತಮ ಶಿಕ್ಷಣ ಹಾಗೂ ಸೌಲಭ್ಯಗಳನ್ನು ನೀಡುತ್ತಿವೆ. ದೇಶದ ಉನ್ನತ ವ್ಯಕ್ತಿಗಳೆನಿಸಿದವರೆಲ್ಲರೂ ಸರ್ಕಾರಿ ಶಾಲೆಗಳಲ್ಲೇ ಓದಿದವರು ಎಂದು ಮಕ್ಕಳಿಗೆ ವಿವರಿಸಿದರು.
ಪ್ರೌಢಾವಸ್ಥೆಯ ಮಕ್ಕಳಿಗೆ ಪೋಕ್ಸೋ ಕಾಯ್ದೆ ಅರಿವು

Leave a comment
Leave a comment


