ತುಮಕೂರು : ನಗರದ ಉಪ್ಪಾರಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕಿಯಾಗಿ ಸುಮಾರು 10 ವರ್ಷಗಳ ಕಾಲ ಕೆಲಸ ನಿರ್ವಹಿಸುತ್ತಿದ್ದ ಎಸ್.ವಿ.ನಂದಿನಿ ಅವರು ಕೈದಾಳದ ಸರ್ಕಾರಿ ಶಾಲೆಗೆ ವರ್ಗಾವಣೆಯಾದ ಪ್ರಯುಕ್ತ ಶಾಲಾ ಆಡಳಿತ ಮಂಡಳಿಯ ವತಿಯಿಂದ ಅದ್ದೂರಿ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಉಪ್ಪಾರಹಳ್ಳಿ ಕುಮಾರ್ ಈ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನಂದಿನಿ ಮೇಡಂರವರು ಮಕ್ಕಳಿಗೆ ಅನುಕೂಲವಾಗುವಂತೆ ನೂತನ ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಮಧ್ಯಾಹ್ನ ಬಿಸಿ ಊಟದ ಭೋಜನ ಕೊಠಡಿ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸಿದ್ದರು, ಅದರೊಂದಿಗೆ ಮಕ್ಕಳ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಪಣೆ ಮಾಡುವುದರ ಮೂಲಕ ಶಾಲೆಯ ಪ್ರಗತಿಗೆ ಅವರ ಕಾರ್ಯ ಶ್ಲಾಘನೀಯವಾಗಿದ್ದು, ಮೇಡಂ ಅವರು ನಮ್ಮ ಶಾಲೆಯಲ್ಲಿ ಒಂದು ದಶಕಗಳ ಕಾಲ ಅತ್ಯುತ್ತಮ ಶಿಕ್ಷಕಿಯಾಗಿ ಕಾರ್ಯನಿರ್ವಹಣೆ ಮಾಡಿ ಇದೀಗ ಕೈದಾಳದ ಸರ್ಕಾರಿ ಶಾಲೆಗೆ ವರ್ಗಾವಣೆ ಆಗಿರುತ್ತಾರೆ, ಅಲ್ಲಿಯೂ ಸಹ ಇವರು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರಮೇಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಶಾಲೆಯ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ ನಂದಿನಿ ಎಂಬ ಶಿಕ್ಷಕಿಯನ್ನು ಅದ್ದೂರಿಯಾಗಿ ಬೀಳ್ಕೊಡುಗೆ ಕೊಡುತ್ತಿರುವುದು ಒಂದು ಅವಿಸ್ಮರಣಿಯ ಘಳಿಗೆ, ಈ ಒಂದು ಸಮಯ ಪ್ರತಿಯೊಬ್ಬ ಶಿಕ್ಷಕರಿಗೂ ದೊರೆಯದು, ಅಂತಹ ಸನ್ನಿವೇಶ ಇವರಿಗೆ ದೊರೆತಿರುವುದು ಅಭಿನಂದನಾರ್ಹ ಇವರಂತೆಯೇ ಬೇರೆ ಶಿಕ್ಷಕರು ಸಹ ಶೈಕ್ಷಣಿಕ ಸೇರಿದಂತೆ ಶಾಲೆ ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದಲ್ಲಿ ಮಕ್ಕಳ ಹಾಗೂ ಶಾಲೆಯ ಅಭಿವೃದ್ಧಿ ಖಂಡಿತ ಸಾಧ್ಯವಾಗುತ್ತದೆ ಎಂದು ಆಶೀವರ್ಚನ ನೀಡಿದರು.
ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ನಂದಿನಿ ಅವರು ನಾನು ಈ ಶಾಲೆಯಿಂದ ಬೇರೆ ಶಾಲೆಗೆ ವರ್ಗಾವಣೆ ಆಗಿರುವುದು ಬೇಸರ ತಂದ ವಿಷಯವಾಗಿದ್ದು, ನಾನು ಇಷ್ಟು ದಿನಗಳ ಕಾಲ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಣೆಗೆ ಸಹಕರಿಸಿದ ಎಸ್.ಡಿ.ಎಂ.ಸಿ ತಂಡ, ಶಾಲಾ ಆಡಳಿತ ಮಂಡಳಿ, ಬೋಧಕ ಮತ್ತು ಬೋದಕೇತರ ಸಿಬ್ಬಂದಿಗಳಿಗೆ ನಾನು ಸದಾ ಚಿರ ಋಣಿಯಾಗಿರುತ್ತೇನೆ, ನನ್ನನ್ನು ಇಷ್ಟು ಅದ್ಧೂರಿಯಾಗಿ ಬೀಳ್ಕೊಡುಗೆ ನೀಡುತ್ತಿರುವ ಸನ್ನಿವೇಶ ನನ್ನ ಜೀವಮಾನದ ಘಳಿಗೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಮುಖ್ಯಸ್ಥರಾದ ಉಪ್ಪಾರಹಳ್ಳಿ ಕುಮಾರ್, ಹಿರೇಮಠದ ಡಾ. ಶಿವನಾಂದ ಶಿವಾಚಾರ್ಯ ಸ್ವಾಮೀಜಿಗಳು, ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಈಶ್ವರಯ್ಯ, ಮುಖ್ಯಶಿಕ್ಷಕರಾದ ಗಿರಿಜಾಂಬ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವಿ, ಎ.ಎಸ್.ಐ. ತಿಪ್ಪೇಸ್ವಾಮಿ, ಸಹ ಶಿಕ್ಷಕರಾದ ಪಂಕಜ, ಇರ್ಫಾನ್ ಅಹಮ್ಮದ್, ಶ್ರೀನಿವಾಸ್ ಶೆಟ್ಟಿ, ನಾಗೇಶ್, ಅಬೂಬಾಕರ್ ಸೇರಿದಂತೆ ಮುಂತದಾದವರು ಉಪಸ್ಥಿತರಿದ್ದರು.