ವಿಶ್ವ ರೇಬಿಸ್ ದಿನಾಚರಣೆ, ತುಮಕೂರು- ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರವನ್ನು ೨೦೩೦ ರೊಳಗೆ ದೇಶದಿಂದಲೇ ನಿರ್ಮೂಲನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಪರ ನಿರ್ದೇಶಕರಾದ ಡಾ. ಪಿ.ಟಿ. ಶ್ರೀನಿವಾಸ್ ಹೇಳಿದರು. ನಗರದ ಎಂ.ಜಿ. ರಸ್ತೆಯಲ್ಲಿರುವ ಬಾಲಭವನದಲ್ಲಿ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ವಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘ, ಜಿಲ್ಲಾ ಶಾಖೆ ವತಿಯಿಂದ ಏರ್ಪಡಿಸಿದ್ದ ವಿಶ್ವ ರೇಬಿಸ್ ದಿನಾಚರಣೆ ತಾಂತ್ರಿಕ ವಿಚಾರ ಸಂಕಿರಣ ಹಾಗೂ ಎನ್ಎಡಿಸಿಪಿ ೪ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಕಾರ್ಯಕ್ರಮದ ಸಿದ್ದತೆಗಳ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ೨೦೨೫ರೊಳಗೆ ಕಾಲುಬಾಯಿ ಜ್ವರ ನಿಯಂತ್ರಣ ಮಾಡುವ ಗುರಿಯೊಂದಿಗೆ ೨೦೩೦ ರೊಳಗೆ ದೇಶದಿಂದಲೇ ಈ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಧ್ಯೇಯೋದ್ದೇಶವನ್ನು ಹೊಂದಿದೆ ಎಂದರು. ಕೇಂದ್ರ ಸರ್ಕಾರದಿಂದ ಶೇ. ೧೦೦ ರಷ್ಟು ಅನುದಾನದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿದೆ. ಈಗಾಗಲೇ ೩ ಸುತ್ತುಗಳ ಲಸಿಕಾ ಕಾರ್ಯಕ್ರಮ ನಡೆಸಲಾಗಿದೆ. ಕಳೆದ ಅವಧಿಯಲ್ಲಿ ಈ ಲಸಿಕಾ ಕಾರ್ಯಕ್ರಮ ಶೇ. ೯೭ ರಷ್ಟು ಗುರಿ ಸಾಧಿಸಲಾಗಿತ್ತು. ಹಾಗೆಯೇ ಈ ಬಾರಿಯೂ ಅಷ್ಟೇ ಪ್ರಮಾಣದಲ್ಲಿ ಗುರಿ ಸಾಧಿಸಲು ಶ್ರಮ ವಹಿಸಿ ಕೆಲಸ ಮಾಡುವಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ೪ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಸೆ. ೨೬ ರಿಂದ ಅ. ೨೬ರ ವರೆಗೆ ನಡೆಯಲಿದೆ. ರಾಜ್ಯದಲ್ಲಿ ಇರುವ ಎಲ್ಲ ಜಾನುವಾರುಗಳಿಗೆ (ದನ ಮತ್ತು ಎಮ್ಮೆ) ಗ್ರಾಮವಾರು ಲಸಿಕೆ ಹಾಕುವಂತೆ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.ಪ್ರತಿ ಬಾರಿಯಂತೆ ಈ ಬಾರಿಯೂ ಕೆಎಂಎಫ್ನವರು ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ರೈತರು ಸಹ ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸುವ ಮೂಲಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಗಿರೀಶ್ಬಾಬು ರೆಡ್ಡಿ ಮಾತನಾಡಿ, ೧೮೮೫ ರಲ್ಲಿ ಲೂಯಿಸ್ ಪ್ಯಾಷರ್ ಎಂಬುವರು ಹುಚ್ಚುನಾಯಿ ಕಡಿತಕ್ಕೆ ಪ್ರಪ್ರಥಮವಾಗಿ ಲಸಿಕೆ ಕಂಡು ಹಿಡಿದರು. ೧೮೯೫ ಸೆ. ೨೮ ರಂದು ಅವರು ಮರಣ ಹೊಂದಿದರು. ಅವರ ಮರಣ ಹೊಂದಿದ ದಿನದ ನೆನಪಿಗಾಗಿ ವಿಶ್ವ ರೇಬಿಸ್ ದಿನಾಚರಣೆಯನ್ನು ಪ್ರತಿ ವರ್ಷ ಸೆ. ೨೮ ರಂದು ಆಚರಣೆ ಮಾಡಲಾಗುತ್ತಿದೆ ಎಂದರು.ಈ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವ ಸಲುವಾಗಿ ಪಶುವೈದ್ಯರಿಗೆ ತಾಂತ್ರಿಕ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಇರುವ ೩೨ ಸಾವಿರ ನಾಯಿಗಳಿಗೆ ಹುಚ್ಚುನಾಯಿ ರೋಗದ ವಿರುದ್ಧ ರೇಬಿಸ್ ಲಸಿಕೆ ಹಾಕುವ ಕಾರ್ಯಕ್ರಮವನ್ನು ಸೆ. ೨೮ ರಿಂದ ಅ. ೨೭ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.ಜಿಲ್ಲೆಯಲ್ಲಿ ೫,೭೩,೨೯೮ ದನ-ಎಮ್ಮೆಗಳಿವೆ. ಇವುಗಳಿಗೆ ಅಗತ್ಯ ಇರುವ ೫.೮೯ ಲಕ್ಷ ಲಸಿಕೆಗಳನ್ನು ಎಲ್ಲ ಪಶು ಆಸ್ಪತ್ರೆಗಳಿಗೆ ಈಗಾಗಲೇ ಸರಬರಾಜು ಮಾಡಲಾಗಿದೆ. ೨೩೯ ಲಸಿಕೆದಾರರು ಮತ್ತು ಕೆಎಂಎಫ್ನಿAದ ೬೧ ವಾಹನಗಳನ್ನು ಸಹ ಈ ಲಸಿಕಾ ಕಾರ್ಯಕ್ರಮಕ್ಕಾಗಿ ನೀಡಲಾಗಿದೆ. ಲಸಿಕೆಗಳನ್ನು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಶೇಖರಿಸಿಡಲಾಗಿದ್ದು, ಸೆ. ೨೮ ರಿಂದ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ೩೨ ಸಾವಿರ ಸಾಕು ನಾಯಿಗಳಿವೆ. ಇವುಗಳಿಗೂ ಉಚಿತವಾಗಿ ಲಸಿಕೆ ಹಾಕಲಾಗುವುದು. ಹಾಗೆಯೇ ಬೀದಿ ನಾಯಿಗಳಿಗೂ ಲಸಿಕೆ ಹಾಕಲಾಗುವುದು. ಪ್ರಾಣಿ ದಯಾ ಸಂಘ ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು, ಗ್ರಾಮಸ್ಥರುಗಳು ಬೀದಿ ನಾಯಿಗಳಿಗೆ ಲಸಿಕೆ ಹಾಕಲು ಸಹಕಾರ ನೀಡಬೇಕು ಎಂದು ಅವರು ಕೋರಿದರು. ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ವೈ.ಜಿ. ಕಾಂತರಾಜು ಮಾತನಾಡಿ, ಪಶು ವೈದ್ಯರಿಗೆ ಲಸಿಕೆ ಹಾಕುವ ಸಂಬAಧ ಹೆಚ್ಚಿನ ತಿಳುವಳಿಕೆ ನೀಡುವ ಸಲುವಾಗಿ ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರೊಂದಿಗೆ ಪಶು ವೈದ್ಯರೇ ಹೆಚ್ಚಿನ ಒಡನಾಟ ಹೊಂದಿರುತ್ತಾರೆ. ಹಾಗಾಗಿ ಜಾನುವಾರುಗಳಿಗೆ ಲಸಿಕೆ ನೀಡಲು ಅರಿವು ಮೂಡಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಘ ಕಾರ್ಯೋನ್ಮುಖವಾಗಿದೆ ಎಂದರು.ಗ್ರಾಮೀಣ ಪ್ರದೇಶಗಳಲ್ಲಿ ರೈತರು ದನ, ಎಮ್ಮೆಗಳ ಬಗ್ಗೆ ಅಸಡ್ಡೆ ತೋರಬಾರದು. ಕಾಳಜಿ ವಹಿಸಿ ಪಶು ವೈದ್ಯಕೀಯ ಇಲಾಖೆ ನೀಡುವ ಲಸಿಕೆಗಳನ್ನು ಹಾಕಿಸಬೇಕು. ಇಲ್ಲದಿದ್ದರೆ ಜಾನುವಾರುಗಳು ವಿನಾ ಕಾರಣ ರೋಗಗಳಿಗೆ ತುತ್ತಾಗಿ ಬಳಲುತ್ತವೆ. ಇದಕ್ಕೆ ಅವಕಾಶ ನೀಡದೆ ಮುತುವರ್ಜಿ ಪಶುವೈದ್ಯರಿಂದ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.ಪಶು ವೈದ್ಯಕೀಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಹಳ್ಳಿಗಳಿಗೆ ತೆರಳಿ ಜಾನುವಾರುಗಳಿಗೆ ತಗಲುವ ರೋಗಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರೈತರು ಸಹ ಸ್ಪಂದಿಸುತ್ತಿದ್ದಾರೆ ಎಂದರು.ನಮ್ಮ ಸಂಘ ಪಶು ವೈದ್ಯರ ಸಮಸ್ಯೆಗಳಿಗೂ ಸಹ ಸಾಕಾರಾತ್ಮಕವಾಗಿ ಸ್ಪಂದಿಸುತ್ತಾ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪಶುವೈದ್ಯಕೀಯ ಇಲಾಖೆಯ ಜಂಟಿ ನಿರ್ದೇಶಕ ಡಾ. ಎನ್.ಎಸ್. ಬಾಲಚಂದ್ರ, ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷರಾದ ಡಾ. ವೈ.ಜಿ. ಕಾಂತರಾಜು, ಪ್ರಧಾನ ಕಾರ್ಯದರ್ಶಿ ಡಾ. ಎಸ್.ಬಿ. ಪುರುಷೋತ್ತಮ್, ಪಶು ವೈದ್ಯರಾದ ಡಾ. ಸುನೀಲ್ಕುಮಾರ್ ಕೆ.ಎಂ., ಜಿಲ್ಲಾ ಪ್ರತಿನಿಧಿ ಡಾ. ಎಸ್. ಶಶಿಕಲಾ, ಜಂಟಿ ಕಾರ್ಯದರ್ಶಿ ಡಾ. ದೇವರಾಜಪ್ಪ ಪಿ., ಖಜಾಂಚಿ ಡಾ. ಮಂಜುನಾಥ್ ಜಿ., ಡಾ. ವಿನೋದ್ಕುಮಾರ್ ವಿ. ಮತ್ತಿತರರು ಉಪಸ್ಥಿತರಿದ್ದರು