ತುಮಕೂರು:ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಗಳು ನಾವು ಕಣ್ಣಾರೆ ಕಂಡ ದೇವರುಗಳು ಎಂದು ಕೆಪಿಸಿಸಿ ವಕ್ತಾರ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಶಿವಕುಮಾರಸ್ವಾಮೀಜಿಗಳ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅವರು ಡಾ.ಬಾಲಗಂಗಾಧರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡುತಿದ್ದ ಅವರು,ಬಡಜನರಿಗಾಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ತೆರೆದು, ಅನ್ನ, ಅಕ್ಷರ, ಆಸರೆ ನೀಡಿ, ನಿಜ ಅರ್ಥದಲ್ಲಿ ಜನರ ಮನಸ್ಸಿನಲ್ಲಿ ನಡೆದಾಡುವ ದೇವರಾಗಿಯೇ ಅಜರಾಮರರಾಗಿದ್ದಾರೆ ಎಂದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಅಧ್ಯಯನ ಪೀಠ ಆರಂಭಿಸಿ ವಿದ್ಯಾರ್ಥಿಗಳು, ಯುವ ಜನರಿಗೆ ಶ್ರೀಗಳ ತತ್ವಾದರ್ಶಗಳನ್ನು ತಿಳಿಸುವ ಕೆಲಸ ಆಗಬೇಕು ಎಂದ ಮುರುಳೀಧರ ಹಾಲಪ್ಪ,ಅವರ ಆದರ್ಶಗಳನ್ನು ನಾವು ಪಾಲಿಸುವ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಮುರುಳೀಧರ ಹಾಲಪ್ಪ ನುಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ ಮಾತನಾಡಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳು ಈ ನಾಡಿನ ಎರಡು ಕಣ್ಣುಗಳಿದ್ದಂತೆ.ತಮ್ಮ ಸೇವೆ, ಮಾರ್ಗದರ್ಶನದ ಮೂಲಕ ನಾಡಿಗೆ ಬೆಳಕಾಗಿದ್ದಾರೆ. ಅವರ ಆದರ್ಶಗಳು ಸದಾ ಸ್ಮರಣೀಯ.
ಈ ವೇಳೆ ಕಾರ್ಯಕ್ರಮದಲ್ಲಿ ರಾಮಮೂರ್ತಿ ಗೌಡ, ಮುಖಂಡರಾದ ದೊಡ್ಡಲಿಂಗಪ್ಪ, ಶ್ರೀನಾಥ್, ಟೂಡಾ ಮಾಜಿ ಅಧ್ಯಕ್ಷ ಸಿದ್ಧಲಿಂಗೇಗೌಡ, ಸಿಮೆಂಟ್ ಮಂಜುನಾಥ್ ಇತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.