ತುಮಕೂರು:- ಈ ಬಾರಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಸ್ವತಂತ್ರ ಅಭ್ಯರ್ಥಿ ವಿನೋದ್ ಶಿವರಾಜ್ ತಿಳಿಸಿದರು.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಮೂಲಕ ಸ್ವತಂತ್ರ ಅಭ್ಯರ್ಥಿ ವಿನೋದ್ ಶಿವರಾಜ್ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ನೀಡುವುದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವುದೇ ನನ್ನ ಮುಖ್ಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ನಾನು ರಾಜಕೀಯಕ್ಕೋಸ್ಕರ ಚುನಾವಣೆಗೆ ನಿಲ್ಲುತ್ತಿಲ್ಲ. ಶಿಕ್ಷಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದ ಉದ್ದೇಶದಿಂದ ಚುನಾವಣೆಗೆ ಬರುತ್ತಿದ್ದೇನೆ ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದು, ಕ್ಷೇತ್ರವಾರು ಶಿಕ್ಷಕರ ಜೊತೆ ಚರ್ಚೆ ನಡೆಸಿ ನಂತರ ಅವರ ಅಭಿಪ್ರಾಯ ಪಡೆದು, ನೀವೇ ಸ್ಪರ್ಧಿಸಬೇಕು ಎಂಬ ಶಿಕ್ಷಕರ ಅಪೇಕ್ಷೆ ಮೇಲೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಖಾಸಗಿ, ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಅದರದ್ದೇ ಆದಂತಹ ಸಮಸ್ಯೆಗಳಿವೆ. ಹಾಗಾಗಿ ಗೆದ್ದ ಬಳಿಕ ಅವುಗಳನ್ನೆಲ್ಲಾ ಬಗೆಹರಿಸುವೆ. ಗೆಲುವು ಖಚಿತವಾಗಿ ನನ್ನದೇ ಆಗುತ್ತದೆ. ಎಲ್ಲರ ಸಹಕಾರ ನನಗಿದೆ. ಹಾಗಾಗಿ ಶಿಕ್ಷಕರ ಕ್ಷೇತ್ರದ ಸಮಸ್ಯೆ ಪರಿಹರಿಸಲು ಒಂದು ಸುವರ್ಣವಕಾಶ ಸಿಗುತ್ತಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಈಗಾಗಲೇ ಶಿಕ್ಷಕರ ಕ್ಷೇತ್ರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಇದರಿಂದ ಶಿಕ್ಷಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಶಿಕ್ಷಕರ ಹುದ್ದೆ ಸೇರಿದಂತೆ ಶಾಲಾ ಆಡಳಿತದಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲು ಶ್ರಮಿಸುವೆ. ಹಾಗೇ ಮುಂದಿನ ದಿನಗಳಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಶಿಕ್ಷಕರೇ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂಬ ನಿಯಮ ಜಾರಿಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರುಪ್ಸಾದ ಅಧ್ಯಕ್ಷ ಹಾಲನೂರು ಲೇಪಾಕ್ಷಿ ಮಾತನಾಡಿ, ಎಲ್ಲರ ಜೊತೆ ಚರ್ಚೆ ನಡೆಸಿ ವಿನೋದ್ ಶಿವರಾಜ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಹಾಗಾಗಿ ಅವರನ್ನೇ ಆಯ್ಕೆ ಮಾಡಿದ್ದೇವೆ. ಅವರ ಗೆಲುವಿಗೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತೇವೆ. ಶಿಕ್ಷಕರ ಕ್ಷೇತ್ರದ ಸಮಸ್ಯೆಗಳನ್ನು ಅವರು ಅರಿತಿದ್ದಾರೆ. ಅವರು ಈ ಚುನಾವಣೆಯಲ್ಲಿ ಗೆಲ್ಲುವುದರಿಂದ ಆ ಸಮಸ್ಯೆಗಳಿಗೆಲ್ಲಾ ಮುಕ್ತಿ ಸಿಗಲಿದೆ. ಇದರಿಂದ ಶಿಕ್ಷಕರು ಯಾವುದೇ ಸಮಸ್ಯೆಯ ಗೊಂದಲಗಳಿಲ್ಲದೆ ಶಿಕ್ಷಣಕ್ಕೆ ಮತ್ತಷ್ಟು ಮಹತ್ವವನ್ನು ನೀಡುತ್ತಾರೆ. ಆಗ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ಸಮಸ್ಯೆ ಉಂಟಾಗಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಖಾಸಗಿ ಅನುದಾನ ರಹಿತ ಒಕ್ಕೂಟದ ಕೋಲಾರ ಜಿಲ್ಲಾ ಅಧ್ಯಕ್ಷ ಸದಾನಂದ, ಪ್ರದಾನ ಕಾರ್ಯದರ್ಶಿ ಜಗದೀಶ ಎಸ್., ಉಪಾಧ್ಯಕ್ಷ ನಾಗಭೂಷಣ್, ನಿರ್ದೇಶಕ ನಯಾಜ್ ಅಹಮದ್ ಸೇರಿದಂತೆ ಮುಖಂಡರಾದ ರಾಮು ಸೇರಿದಂತೆ ಇತರರು ಇದ್ದರು.