ಗ್ರಾಮ ಆರೋಗ್ಯ ಅಮೃತ ಅಭಿಯಾನದಲ್ಲಿ ತಾ.ಪಂ. ಇಓ ಡಾ.ದೊಡ್ಡಸಿದ್ದಯ್ಯ ಸಲಹೆ
ನರೇಗಾ: ದೈಹಿಕ ಸದೃಢತೆಗೆ ಉತ್ತಮ ಆರೋಗ್ಯ ಅಗತ್ಯ
ತುಮಕೂರು: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಪ್ರತಿಯೊಬ್ಬರೂ ತಪ್ಪದೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದುವಂತೆ ಕೊರಟಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ.ದೊಡ್ಡಸಿದ್ದಯ್ಯರವರು ಸಲಹೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ತುಮಕೂರು, ತಾಲ್ಲೂಕು ಪಂಚಾಯಿತಿ ಕೊರಟಗೆರೆ ಹಾಗೂ ಗ್ರಾಮ ಪಂಚಾಯಿತಿ ಕ್ಯಾಮೇನಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಸಹಕಾರದೊಂದಿಗೆ ಕ್ಯಾಮೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ನರೇಗಾ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೂನ್ 30 ರವರೆಗೆ ಒಂದು ತಿಂಗಳ ಕಾಲ ಈ ಆರೋಗ್ಯ ಅಮೃತ ಅಭಿಯಾನವನ್ನು ಕೊರಟಗೆರೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳುತ್ತಿದ್ದು, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಕೂಲಿ ಕಾರ್ಮಿಕನೂ ಈ ಆರೋಗ್ಯ ಶಿಬಿರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ನರೇಗಾ ಕಾಮಗಾರಿಗಳಲ್ಲಿ ಗ್ರಾಮೀಣ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ.ದೊಡ್ಡಸಿದ್ದಯ್ಯರವರು ಕರೆ ನೀಡಿದರು.
ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಸಿಂಗ್ ರವರು ಮಾತನಾಡಿ, ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜನರು ನರೇಗಾ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನರೇಗಾ ಯೋಜನೆಯಲ್ಲಿ ಒಂದು ಕುಟುಂಬಕ್ಕೆ 100 ದಿನಗಳ ಉದ್ಯೋಗ ಸಿಗಲಿದ್ದು, ಗಂಡು-ಹೆಣ್ಣಿಗೆ ದಿನಕ್ಕೆ 316 ರೂಪಾಯಿ ಸಮಾನ ಕೂಲಿ ನೀಡಲಾಗುವುದು. ಸರ್ಕಾರದ ಈ ಸೌಲಭ್ಯವನ್ನು ಗ್ರಾಮೀಣ ಜನತೆ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕ್ಯಾಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಂದ ಶಶಿಧರ್, ಪ್ರಾಥಮಿಕ ಆರೋಗ್ಯಾಧಿಕಾರಿ ಗೌತಮ್, ಆರೋಗ್ಯ ನಿರೀಕ್ಷಕ ವೀರೇಶ್, ಸಮುದಾಯ ಆರೋಗ್ಯಾಧಿಕಾರಿ ಹೆಚ್.ಆರ್.ಛಾಯಾದೇವಿ, ತಾಲ್ಲೂಕು ಐಇಸಿ ಸಂಯೋಜಕ ಟಿ.ಕೆ.ವಿನುತ್, ತಾಲ್ಲೂಕು ಸಂಯೋಜಕರಾದ ಮಂಗಳಗೌರಿ ಸೇರಿದಂತೆ ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದಡಿ 100 ಕ್ಕೂ ಹೆಚ್ಚು ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.
ಗ್ರಾಮ ಆರೋಗ್ಯ ಅಮೃತ ಅಭಿಯಾನ
Leave a comment
Leave a comment