ಕೊಬ್ಬರಿ ಬೆಂಬಲಬೆಲೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಕ್ಟೋಬರ್ ೪ರಂದು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಬ್ಬರಿಗೆ ಕನಿಷ್ಠ ೨೦ ಸಾವಿರ ಬೆಂಬಲ ಬೆಲೆ ನೀಡಬೇಕು, ಹೆಚ್ಚುವರಿಯಾಗಿ ೫೦ ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಬೇಕು ಎಂದು ಆಗ್ರಹಿಸಿ ಸೆಪ್ಟೆಂಬರ್ ೨೬ರಂದು ಅರಸೀಕೆರೆ ಎಪಿಎಂಸಿ ಮಾರುಕಟ್ಟೆಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಕಾಯ್ದೆಯನ್ನು ಹಿಂಪಡೆಯುವ ಕೆಲಸವನ್ನು ಮಾಡಿಲ್ಲ, ಸಿದ್ದರಾಮಯ್ಯ ಅವರಿಗೆ ಅಧಿಕಾರದ ಮೇಲಿರುವ ಆಸೆ, ರೈತರ ಹಿತಾಸಕ್ತಿ ಕಾಯುವುದರಲ್ಲಿ ಇಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿಯೇ ಮಳೆ ಕೊರತೆ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಅಗತ್ಯವೇನಿತ್ತು? ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ತಪ್ಪು ಮಾಡಿದೆ, ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ನೀರು ಹರಿಸಲೇ ಇಲ್ಲ, ಸುಪ್ರೀಂಕೋರ್ಟ್ ಅವರನ್ನು ಬಂಧಿಸಿತಾ? ಅಂತಹ ಧೈರ್ಯವನ್ನು ಕೇಂದ್ರ ಸರ್ಕಾರ ಮಾಡಲಿದೆಯೇ? ರಾಜ್ಯದ ಜನರು ನೋಡುತ್ತಾರೆ ಅಂತಹ ದಿಟ್ಟತನವನ್ನು ಸಿದ್ದರಾಮಯ್ಯ ಪ್ರದರ್ಶಿಸಬೇಕು ಎಂದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕಾಮನ್ ಸೆನ್ಸ್ ಇಲ್ಲ. ಕೊಬ್ಬರಿ ಧಾರಣೆ ೧೨ ಸಾವಿರ ಇದ್ದಿದ್ದರೆ ನಾವೇಕೆ ಬೀದಿಗೆ ಇಳಿದು ಹೋರಾಟ ಮಾಡಬೇಕಿತ್ತು? ಕೊಬ್ಬರಿ ಧಾರಣೆ ೮ ಸಾವಿರಕ್ಕೆ ಇಳಿದಿದೆ, ಅದಕ್ಕಾಗಿಯೇ ಕನಿಷ್ಠ ೨೦ ಸಾವಿರ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಪಾದಯಾತ್ರೆ ಮಾಡುತ್ತಿರುವುದು ಎಂದು ಹೇಳಿದ್ದಾರೆ.