ಗೃಹ ಸಚಿವರಿಂದ ವಿಧಾನಸೌಧ ಭದ್ರತೆ ಪರಿಶೀಲನೆ
ಬೆಂಗಳೂರು (ಮೇ 17):- ವಿಧಾನಸೌಧದ ಪ್ರವೇಶ ದ್ವಾರಗಳಲ್ಲಿ ಹೊಸದಾಗಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್, ಬ್ಯಾಗ್ ಸ್ಕ್ಯಾನರ್ಗಳನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿಯವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದರು. ಬಳಿಕ ಭದ್ರತೆಯನ್ನು ಪರಿಶೀಲನೆ ನಡೆಸಿ, ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡ ಅವರಿಂದ ಮಾಹಿತಿ ಪಡೆದರು. ಮೆಟಲ್ ಡಿಟೆಕ್ಟರ್, ಬ್ಯಾಗ್ ಸ್ಕ್ಯಾನರ್ಗಳ ಗುಣಮಟ್ಟತೆಯ ಬಗ್ಗೆ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು, ವಿಧಾನಸೌಧ ಭದ್ರತಾ ವಿಭಾಗದ ವ್ಯಾಪ್ತಿಗೆ ಬರುವ ವಿಧಾನಸೌಧದ 4 ಗೇಟ್, ವಿಕಾಸಸೌಧದ 3 ಗೇಟ್, ಹೈಕೋರ್ಟ್ನ 6 ಗೇಟ್, ರಾಜಭವನ ಪ್ರವೇಶ ದ್ವಾರಗಳಲ್ಲಿ ಹೊಸದಾಗಿ ಉನ್ನತ ಗುಣಮಟ್ಟದ ಬ್ಯಾಗ್ ಸ್ಕ್ಯಾನರ್, ಮೆಟಲ್ ಡಿಟೆಕ್ಟರ್, ಕ್ಯೂಆರ್ ಕೋಡ್ ಯಂತ್ರ ಸೇರಿದಂತೆ ಇನ್ನಿತರ ಉಪಕರಣಗಳನ್ನು ಭದ್ರತೆಗೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ಇನ್ನುಮುಂದೆ ಆನ್ಲೈನ್ ಮೂಲಕ ವಿಧಾನಸೌಧ ಪ್ರವೇಶದ ಪಾಸ್ಗಳನ್ನು ವಿತರಿಸಲಾಗುತ್ತದೆ. ಪಾಸ್ ಮತ್ತು ಗುರುತಿನ ಕಾರ್ಡ್ಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಆನ್ಲೈನ್ ಮೂಲಕ ಪಡೆದ ಕ್ಯೂಆರ್ ಕೋಡ್ ಪಾಸ್ಗಳನ್ನು ಪರಿಶೀಲಿಸಲಿದ್ದಾರೆ. ಗುಣಮಟ್ಟದ ಉಪಕರಣಗಳನ್ನು ಅಳವಡಿಸಿರುವುದರಿಂದ, ಯಾರಾದರು ಅನುಮಾನಸ್ಪದ ವಸ್ತುಗಳನ್ನು ತೆಗೆದುಕೊಂಡು ಬಂದರೆ ಪತ್ತೆಹಚ್ಚಲು ಸುಲಭವಾಗುತ್ತವೆ ಎಂದರು.
ಈ ಎಲ್ಲ ಉಪಕರಣಗಳು ಮೂರು ವರ್ಷದ ಹಿಂದೆಯೇ ಹಾಳಾಗಿದ್ದವು. ನಾವು ಈಗ ಅಳವಡಿಸಿದ್ದೇವೆ. ಸುರಕ್ಷತೆ ದೃಷ್ಟಿಯಿಂದ ಅವಶ್ಯಕತೆ ಇತ್ತು. ಇನ್ನುಮುಂದೆ ಕೈಯಿಂದ ಪಾಸ್ಗಳನ್ನು ವಿತರಿಸುವುದಿಲ್ಲ ಎಂದು ಹೇಳಿದರು.
ಸಾರ್ವಜನಿಕರು ಪೂರ್ವಭಾಗದ ಗೇಟ್ನಿಂದ ಬರಬೇಕು. ಪಶ್ಚಿಮ ದ್ವಾರದಿಂದ ಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧಕ್ಕೆ ಭದ್ರತೆಯನ್ನು ಇನ್ನಷ್ಟು ಕಠಿಣ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಈಗಾಗಲೇ ಕೆಎಸ್ಐಎಸ್ಎಫ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ವಿಧಾನಸೌಧದ ಭದ್ರತೆಯಲ್ಲಿ ಮತ್ತಷ್ಟು ಮಾರ್ಪಾಡು ತರಲಾಗುವುದು ಎಂದರು.
ಅಧಿವೇಶನದಲ್ಲಿ ಬೇಕಾಬಿಟ್ಟಿ ಜನಗಳನ್ನು ಬಿಡುವುದಿಲ್ಲ. ಯಾರೋ ಪಾಸ್ ಪಡೆದು ಸಂಸತ್ ಭವನ ಪ್ರವೇಶಿಸಿ, ದಾಂಧಲೆ ಎಬ್ಬಿಸಿದ್ದರು. ಆ ರೀತಿಯ ಘಟನೆಗಳು ಸಂಭವಿಸಬಾರದು ಎಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಗಿದೆ. ವಿಧಾನಸೌಧಲ್ಲಿ ಮುಖ್ಯಮಂತ್ರಿ, ಸಚಿವರು, ಸಚಿವಾಲಯ, ಅಸೆಂಬ್ಲಿ ಇದೆ. ಇದೆಲ್ಲವನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.