ವಿಶೇಷಚೇತನರು ಸುಲಲಿತವಾಗಿ ಮತದಾನ ಮಾಡಲು ವಾಹನ ವ್ಯವಸ್ಥೆ : ಜಿಲ್ಲಾಧಿಕಾರಿ
ತುಮಕೂರು(ಕ.ವಾ) ಏ.೩: ಜಿಲ್ಲೆಯಲ್ಲಿ ಸುಮಾರು ೨೯೭೦೦ ವಿಶೇಷಚೇತನ ಮತದಾರರಿದ್ದು, ಇವರೆಲ್ಲರೂ ಮೇ ೧೦ರ ‘ಮತದಾನಹಬ್ಬ’ದ ದಿನ ಮತದಾನ ಮಾಡಲು ಅನುಕೂಲವಾಗುವಂತೆ ಅಂದು ಪ್ರತಿ ಗ್ರಾಮಪಂಚಾಯಿತಿಗೆ ಒಂದರAತೆ ವಾಹನ ಸೌಲಭ್ಯ ಕಲ್ಪಿಸಲಿದ್ದು, ಈ ಸೌಲಭ್ಯವನ್ನು ಬಳಸಿಕೊಂಡು ವಿಶೇಷಚೇತನರು ತಮ್ಮ ವ್ಯಾಪ್ತಿಯ ಮತಗಟ್ಟೆಗೆ ತೆರಳಿ ತಪ್ಪದೆ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮನವಿ ಮಾಡಿದರು.
ವಿಕಲಚೇತನ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದಕ್ಕಾಗಿ ಮತಗಟ್ಟೆಗಳಿಗೆ ತಲುಪಲು ಪ್ರತಿ ಗ್ರಾಮ ಪಂಚಾಯಿತಿ ೬-೮ ಕಿಲೋ ಮೀಟರ್ ವ್ಯಾಪ್ತಿಗೆ ಒಂದು ಆಟೋವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ವತಿಯಿಂದ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕರ್ನಾಟಕ ವಿಧಾನ ಸಭಾ ಚುನಾವಣೆ ೨೦೨೩ರ’ ವಿಕಲಚೇತನರ ಹಾಗೂ ತೃತೀಯ ಲಿಂಗಿ ಮತದಾರರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಲೆ ಮತ್ತು ಸಂಗೀತಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅತ್ಯುತ್ತಮ ಕಲಾವಿದರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಅವರು ತಮ್ಮ ಸಂಗೀತ ಗಾಯನದ ಮೂಲಕ ಮತದಾರರಲ್ಲಿ ಅರಿವು ಮೂಡಿಸಬೇಕು. ತೃತೀಯ ಲಿಂಗಿ ಮತದಾರರು ತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವುದರ ಕುರಿತು ತೃತೀಯ ಲಿಂಗಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಮತದಾನದ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಬೇಕು ಹಾಗೂ ಯಾವ ಮತದಾರ ಮತಗಟ್ಟೆಗೆ ಬರಲು ಸಾಧ್ಯವಿಲ್ಲವೋ ಅಂತಹ ಮತದಾರ ನಮೂನೆ ೧೨ಡಿ ಅನ್ನು ಪಡೆದು ಅಂಚೆಮತ ಚಲಾಯಿಸಬೇಕು. ಉಳಿದವರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬೇಕು ಎಂದು ಹೇಳಿದರು.