ಶಿಕ್ಷಕರ ಒಗ್ಗಟ್ಟು ವಿದ್ಯಾರ್ಥಿಗಳ ಗೆಲುವಾದರೆ, ಆಡಳಿತ ಹಾಗೂ ಅಧಿಕಾರ ವರ್ಗದ ಅನ್ಯೋನ್ನತೆ ಶಿಕ್ಷಣ ಸಂಸ್ಥೆಯ ಯಶಸ್ಸು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಬೋಧಕ-ಬೋಧಕೇತರ ಸಿಬ್ಬಂದಿಯ ‘ವಿಸಿ ಕಪ್’ ಕ್ರಿಕೆಟ್ ಪಂದ್ಯವನ್ನು ಉದ್ಘಾಟಿಸಿದರು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಉಲ್ಲಾಸ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ನಮ್ಮಲ್ಲಿ ಏಕತೆಯನ್ನು
ಕಾಣಬಹುದು. ದೇಹವನ್ನು ದಂಡಿಸಿದಾಗ ಮಾತ್ರ ನಮ್ಮ ಮೆದುಳು ಚುರುಕುಗೊಳ್ಳುತ್ತದೆ ಮತ್ತು ನಮ್ಮಲ್ಲಿ ಹೊಸ ಚೈತನ್ಯ ಮೂಡುತ್ತದೆ ಹಾಗೂ ದಿನನಿತ್ಯ ಉತ್ಸಾಹದಿಂದ ಇರಲು ಸಾಧ್ಯ ಎಂದರು.ತರಗತಿ, ಗ್ರಂಥಾಲಯ, ಮೈದಾನದಲ್ಲಿ ಕಲಿಯುವ ಜ್ಞಾನವೇ ಅನಂತ. ಕ್ರೀಡೆಯಿಂದ ಹಲವಾರು ಉತ್ತಮ ಗುಣಗಳನ್ನು ಪಡೆಯುತ್ತೇವೆ. ಕ್ರೀಡೆಯ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಏಕತೆಯಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ಕ್ರೀಡೆಯಿಂದ ನಮ್ಮಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕ್ರೀಡೆ ಸಹಕಾರಿ ಎಂದರು.ತುಮಕೂರು ವಿವಿ ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ್ ಭಾಗವಹಿಸಿದ್ದರು.