ತುಮಕೂರು(ಕ.ವಾ.)ಜೂ.೫: ಸಂಸದರಾದ ಜಿ.ಎಸ್. ಬಸವರಾಜು ಅವರು ಜಿಲ್ಲಾ ಗ್ರಂಥಾಲಯಕ್ಕೆ ಇಂದು ಅನಿರೀಕ್ಷಿತವಾಗಿ ಭೇಟಿ ನೀಡಿ, ನೂರಾರು ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡುತ್ತಿರುವುದನ್ನು ವೀಕ್ಷಿಸಿ ಗ್ರಂಥಾಲಯ ಸದ್ಬಳಕೆಯಾಗುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಓದುಗರಿಗೆ ಗ್ರಂಥಾಲಯವು ದೇವಾಲಯವಾಗಿದ್ದು, ಗ್ರಂಥಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದು ನಮ್ಮ ಆಸ್ತಿ ಎಂಬ ಭಾವನೆ ಇರಬೇಕು. ದೇಶವನ್ನು ಉನ್ನತ ಮಟ್ಟದಲ್ಲಿ ಬದಲಾವಣೆ ಮಾಡುವ ಶಕ್ತಿ ಇದ್ದರೆ ಅದು ವಿದ್ಯಾರ್ಥಿಗಳಿಗೆ ಮಾತ್ರ. ಬಡತನದಲ್ಲಿಯೇ ಬೆಳೆದ ಭಾರತರತ್ನ ಡಾ: ಬಿ.ಆರ್. ಅಂಬೇಡ್ಕರ್ ಅವರು ಗ್ರಂಥಾಲಯದ ಪುಸ್ತಕಗಳನ್ನು ಓದಿಯೇ ಉನ್ನತ ವಿದ್ಯಾಭ್ಯಾಸವನ್ನು ಪಡೆದು ಸಂವಿಧಾನ ಶಿಲ್ಪಿಯಾದರು. ಅದೇ ರೀತಿ ವಿದ್ಯಾರ್ಥಿಗಳು ಜೀವನದಲ್ಲಿ ಬರುವ ಕಷ್ಟವನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯಾದರೆ ಆ ಮೂಲಕ ದೇಶವೇ ಅಭಿವೃದ್ಧಿಯಾದಂತೆ ಎಂದು ಅಭಿಪ್ರಾಯಪಟ್ಟರು.