ಬಿಜೆಪಿ ಜೊತೆ ಮೈತ್ರಿಗೆ ತುಮಕೂರು ಜಿಲ್ಲಾ ಜೆಡಿಎಸ್ ಒಪ್ಪಿಗೆ ಸೂಚಿಸಿದೆ. ಆದರೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಟಿಕೆಟ್ ನೀಡಬೇಕೆಂಬ ಷರತ್ತು ವಿಧಿಸಿದೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಸೂಚನೆಯಂತೆ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದು, ಎಲ್ಲರು ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ತುಮಕೂರು ಲೋಕಸಭಾ ಕ್ಷೇತ್ರದಿಂದ ಈ ಹಿಂದೆಯೂ ದೇವೇಗೌಡರು ಸ್ಪರ್ಧಿಸಿದ್ದರು, ಈ ಬಾರಿಯೂ ದೇವೇಗೌಡರು ಸ್ಪರ್ಧಿಸಬೇಕೆಂಬುದು ನಮ್ಮ ಒತ್ತಾಯ. ಒಂದು ವೇಳೆ ಎಚ್.ಡಿ.ದೇವೇಗೌಡರು ಬರದಿದ್ದರೆ, ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಬೇಕೆಂಬುದು ನಮ್ಮ ಅಭಿಪ್ರಾಯ. ಜೆಡಿಎಸ್ ಪಕ್ಷ ಯಾರಿಗೆ ಲೋಕಸಭಾ ಟಿಕೇಟ್ ನೀಡಿದರೂ ಬಿಜೆಪಿಯೊಂದಿಗೆ ಸೇರಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದ್ದಾರೆ.
ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ರಾಜಕಾರಣದಲ್ಲಿ ಯಾರು ಶಾಶ್ವತ ವೈರಿಗಳಲ್ಲ. ಮಿತ್ರರೂ ಅಲ್ಲ. ಅನಿವಾರ್ಯ ಕಾರಣಗಳಿಂದ ಮೈತ್ರಿಗೆ ಹೈಕಮಾಂಡ್ ಮುಂದಾಗಿದೆ. ತಳಮಟ್ಟದಲ್ಲಿ ಎರಡು ಪಕ್ಷಗಳು ಮುಖಂಡರು, ಕಾರ್ಯಕರ್ತರು ಕುಳಿತು ಮಾತನಾಡಿ, ನಮ್ಮ ನಡುವೆ ಇರುವ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಮುಂದಾಗುತ್ತೇವೆ ಎಂದರು.
ಸರ್ಕಾರ ಬೀಳಿಸಿದವರೊಂದಿಗೆ ಮೈತ್ರಿ ಎಂದು ಹೇಳುವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅಧಿಕಾರ ಅನುಭವಿಸಿದವರನ್ನು ಮತ್ತೆ ಪಕ್ಷಕ್ಕೆ ಕರೆತರುತ್ತಿರುವುದು ಯಾವ ಉದ್ದೇಶದಿಂದ ಎಂದು ಪ್ರಶ್ನಿಸಿದರು.
ಕುಣಿಗಲ್ ಮಾಜಿ ಶಾಸಕ ಡಿ.ನಾಗರಾಜಯ್ಯ ಮಾತನಾಡಿ, ನಮ್ಮ ಪಕ್ಷದಿಂದ ಗೌರಿಶಂಕರ್ ಸೇರಿದಂತೆ ಯಾರೊಬ್ಬರು ಕಾಂಗ್ರೆಸ್ಗೆ ಹೋಗುವುದಿಲ್ಲ ಎಂಬ ನಂಬಿಕೆ ನಮ್ಮದು. ಒಂದು ವೇಳೆ ಹೋದರೆ ಏನು ಮಾಡಲು ಸಾಧ್ಯ. ಇರುವವನ್ನೇ ಹುರಿದುಂಬಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಪರಾಜಿತ ಅಭ್ಯರ್ಥಿಗಳಾದ ಗುಬ್ಬಿ ನಾಗರಾಜು, ಶಿರಾ ಉಗ್ರೇಶ್, ತಿಪಟೂರು ಶಾಂತರಾಜು, ಮುಖಂಡರಾದ ಮುದಿಮಡು ರಂಗಸ್ವಾಮಿ, ಟಿ.ಆರ್.ನಾಗರಾಜು, ವಿಜಯಗೌಡ, ರಂಗನಾಥ್, ತಾಹೀರಾಭಾನು ಇದ್ದರು.
ಬಿಜೆಪಿ ಜೊತೆ ಮೈತ್ರಿಗೆ ತುಮಕೂರು ಜಿಲ್ಲಾ ಜೆಡಿಎಸ್ ಒಪ್ಪಿಗೆ ಸೂಚಿಸಿದೆ
Leave a comment
Leave a comment