ತುಮಕೂರು: ಹಿಂದಿನ ಚುನಾವಣೆಗಳ ಗಣಿತ ಲೆಕ್ಕಾಚಾರದಿಂದ ಮುಂಬರುವ ಚುನಾವಣೆಗಳನ್ನು ಗೆಲ್ಲಲಾಗುವುದಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಲ್ಲಿ ನಿಮ್ಮೊಡನೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ತುಂಬಿ, ಪಕ್ಷದ ಪರ ಪ್ರಚಾರ ಮಾಡಿದರೆ ಚುನಾವಣೆ ಗೆಲ್ಲಲು ಸಾದ್ಯವಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸೋಮವಾರ ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ನಂಬಿ ಬದುಕುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ. ಜೂನ್ ತಿಂಗಳಿನಿoದ ಹಾಲಿನ ಸಬ್ಸಿಡಿ ಹಣವನ್ನು ಸರ್ಕಾರ ನೀಡಿಲ್ಲ. ಬೇಸಿಗೆ, ಬರಗಾಲದಲ್ಲಿ ಜಾನುವಾರುಗಳಿಗೆ ಮೇವು, ಆಹಾರ ಹೊಂದಿಸಲು ರೈತರು ಕಷ್ಟಪಡುತ್ತಿದ್ದಾರೆ. ಹೈನುಗಾರಿಕೆಯನ್ನೇ ಬದುಕಿನ ಆಧಾರ ಮಾಡಿಕೊಂಡವರಿಗೆ ಸರ್ಕಾರ ಕೊಡಬೇಕಾದ ಹಣ ನಿಲ್ಲಿಸಿ ಅನ್ಯಾಯ ಮಾಡಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಹಣ ಬಿಡುಗಡೆ ಮಾಡಲಿ ಎಂದು ಹೇಳಿದರು.
ವಿವಿಧ ಕಾರಣಗಳಿಂದ ಅನೇಕ ಹಾಲು ಉತ್ಪಾದಕರ ಸೊಸೈಟಿಗಳ ಆಡಳಿತ ಮಂಡಳಿಗಳನ್ನು ರದ್ದು ಮಾಡಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸರ್ಕಾರ ಅಂತಹ ಸೊಸೈಟಿಗಳಿಗೆ ಶೀಘ್ರ ಚುನಾವಣೆ ನಡೆಸಿ ರೈತ ಪ್ರತಿನಿಧಿಗಳು ಡೇರಿಗಳ ವ್ಯವಹಾರ ನಡೆಸಲು ಅವಕಾಶ ಮಾಡಿಕೊಡಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಆಕ್ಷೇಪವಿಲ್ಲ. ಆದರೆ ಬಸ್ಸಿನಲ್ಲಿ ಓಡಾಡುವವರಿಗೆ ನೀಡುವ ಆದ್ಯತೆಯನ್ನು ದುಡಿಯುವ ರೈತರಿಗೆ ಕೊಡುತ್ತಿಲ್ಲ. ಇಂತಹ ಸಂಕಷ್ಟದಲ್ಲಿರುವ ರೈತರ ಪರ ಪಕ್ಷದ ಮುಖಂಡರು ಧ್ವನಿಮಾಡಿ ಅವರಿಗೆ ಸ್ಪಂದಿಸಿ ನೆರವಾಗಬೇಕು. ಎಂದು ಮಾಧುಸ್ವಾಮಿ ಹೇಳಿದರು.
ಚುನಾವಣೆಗಳನ್ನು ಗೆಲ್ಲಿಸುವುದು ಲೀಡರ್ಗಳಲ್ಲ, ಕಾರ್ಯಕರ್ತರು. ಮುಖಂಡರು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಬೇಕು. ಅವರ ಕೆಲಸ ಗುರುತಿಸಿ ಪ್ರಶಂಸಿಸಬೇಕು. ಕಾರ್ಯಕರ್ತರೂ ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಜನರಲ್ಲಿ ಬಿಜೆಪಿ ಬಗ್ಗೆ ವಿಶ್ವಾಸ ತುಂಬಬೇಕು ಎಂದು ಹೇಳಿದರು.
ಮಾಜಿ ಸಚಿವ, ತುಮಕೂರು ಲೋಕಸಭಾ ಕ್ಷೇತ್ರದ ಉಸ್ತುವಾರಿ ಗೋಪಾಲಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2019 ಲೋಕಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಅದಕ್ಕಾಗಿ ಪಕ್ಷದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರಗಳ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷದಲ್ಲಿ ಸ್ವಾತಂತ್ರö್ಯ ನಂತರ ದೇಶದಲ್ಲಿ ಆಗದೇ ಇರುವಂತಹ ಅಭಿವೃದ್ಧಿ ಕೆಲಸ ಮಾಡಿದರು. ವಿಶ್ವಮಟ್ಟದಲ್ಲಿ ದೇಶದ ಘನತೆ ಸಾರಿರುವ ಮೋದಿಯವರು ಈ ಮೂಲಕ ದೇಶದ 140 ಕೋಟಿ ಜನರ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅವರು ಮತ್ತೆ ಪ್ರಧಾನಿಯಾಗಿ ದೇಶದ ಮತ್ತಷ್ಟು ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.