ತುಮಕೂರು: ಕುಣಿಗಲ್ ರಸ್ತೆಯಲ್ಲಿರುವ ರಾಮಕೃಷ್ಣ ನಗರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ವತಿಯಿಂದ ಶ್ರೀ ಶಿರಡಿ ಸಾಯಿಬಾಬಾ ರವರ 12ನೇ ವಾರ್ಷಿಕೋತ್ಸವವನ್ನು ವಿವಿಧ ಧಾರ್ಮಿಕ ಪೂಜಾ ವಿಧಾನಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
12ನೇ ವಾರ್ಷಿಕೋತ್ಸವದ ವಿಶೇಷವಾಗಿ ಸಾಯಿಬಾಬಾರವರಿಗೆ ಕಾಕಡಾರತಿ, ಕ್ಷೀರಾಭಿಷೇಕ, ಲೋಕಕಲ್ಯಾಣಾರ್ಥ ವಿಶೇಷ ಹೋಮ, ಪೂರ್ಣಾಹುತಿ ನೆರವೇರಿಸಲಾಯಿತು.

ಬಾಬಾರವರ 12ನೇ ವಾರ್ಷಿಕೋತ್ಸದ ಅಂಗವಾಗಿ ನಗರದಲ್ಲಿ ಭಿಕ್ಷಾಟನೆ ಸಹ ನಡೆಯಲಾಯಿತು. ನಂತರ ಸಾಯಿ ಭಜನೆ ಹಾಗೂ ವಿಷ್ಣು ಸಹಸ್ರನಾಮ ನೆರವೇರಿದವು.
ವಿಶೇಷ ಧಾರ್ಮಿಕ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ಜಿ.ಎಸ್. ಬಸವರಾಜು ಅವರು, ಸಾಯಿಬಾಬಾ ಅವರ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಬಾಬಾ ಮಂದಿರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ್ದು, ಈ ಬಾರಿ ಲೋಕಕಲ್ಯಾಣಾರ್ಥ ಹೋಮ ಸಹ ಮಾಡಲಾಯಿತು ಎಂದರು.

ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಜನರು ಶಾಂತಿ, ಸಮೃದ್ಧಿಯಾಗಿರಲಿ ಎಂದು ಪ್ರಾರ್ಥಿಸಿ ಹೋಮ ನೆರವೇರಿಸಲಾಯಿತು. ರೈತರು ಬೆಳೆ ಬೆಳೆದರೆ ಮಾತ್ರ ನಗರ, ಪಟ್ಟಣ ಪ್ರದೇಶಗಳಲ್ಲಿನ ಜನ ಸಂತೃಪ್ತಿಯಾಗಿರಲು ಸಾಧ್ಯ. ರೈತ ಬೆಳೆ ಬೆಳೆಯಬೇಕೆಂದರೆ ಉತ್ತಮ ಮಳೆಯಾಗಬೇಕು. ಮಳೆ ಆಗದಿದ್ದರೆ ಅನ್ನದಾತ ಸಂಕಷ್ಟಕ್ಕೆ ಸಿಲುಕುತ್ತಾನೆ. ಹಾಗಾಗಿ ಉತ್ತಮ ಮಳೆಯಾಗಿ ನಾಡು ಸುಭಿಕ್ಷವಾಗಿರುವಂತೆ ಬಾಬಾರವರಲ್ಲಿ ಪ್ರಾರ್ಥಿಸಲಾಯಿತು ಎಂದರು.
ಬಾಬಾರವರ 12ನೇ ವಾರ್ಷಿಕೋತ್ಸವದ ಅಂಗವಾಗಿ ಭಕ್ತರಿಗೆ ದಿನಪೂರ್ತಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ ಸಾಯಿಬಾಬಾ ರವರ ಪಲ್ಲಕ್ಕಿ ಉತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಿಂದ ನಡೆಯಿತು. ಸಿರಾ ತಾಲ್ಲೂಕಿನ ಚಿಕ್ಕನಹಳ್ಳಿಯ ವೀರೇಶಕುಮಾರ್ ಅವರಿಂದ ಚಿಟ್ಟಿಮೇಳ, ವೀರಭದ್ರ ಕುಣಿತ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ, ಯೋಗ ತಜ್ಞ ನಾಗರರಾಜರಾವ್, ಜೈಭಾರತ್ ಹರೀಶ್ ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.