ತುಮಕೂರು : ತುಮಕೂರು ಮಹಾನಗರ ಪಾಲಿಕೆ, ಜಿಲ್ಲಾ ಕೌಶಲ್ಯಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ “ಸ್ವ-ನಿಧಿ” ಸೇ ಸಮೃದ್ಧಿ ಮೇಳ ಕಾರ್ಯಕ್ರಮವನ್ನು ತುಮಕೂರು ನಗರದ ಜೆ.ಸಿ.ರಸ್ತೆಯಲ್ಲಿರುವ ವೀರಸೌಧ ಕಟ್ಟಡದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ತೇಜಾವತಿರವರು ಆಗಮಿಸಿ ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಆಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿಯ ಇತರೆ ಉದ್ಯೋಗಗಳ ಕೆಲಸಗಾರರು ಅಸಂಘಟಿತ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಕಾರ್ಮಿಕರಿಗೆ ಅವರ ಜೀವನ ಸಂಧ್ಯಾಕಾಲದಲ್ಲಿ ದುಡಿದು ತಮ್ಮನ್ನು ಪೋಷಿಸಿಕೊಳ್ಳಲು ಆರ್ಥಿಕ ಮೂಲಗಳು ಇರುವುದಿಲ್ಲ ಇಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ಅವರ ವಯೋವೃದ್ಧ ವೇಳೆಯಲ್ಲಿ ಸಾಮಾಜಿಕ ಭದ್ರತೆ ಕಲ್ಪಿಸಲು ಭಾರತ ಸರ್ಕಾರವಯ ಪ್ರಧಾನಮಂತ್ರಿ ಶ್ರಮ್ ಯೋಗಿ ಮನ್-ಧನ್ (ಪಿಎಂ-ಎಸ್ವೈಎo) ಎಂಬ ಮಹತ್ವಾಕಾಂಕ್ಷಿ ವಂತಿಗೆ ಆಧಾರಿತ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುತ್ತದೆ, ಇದನ್ನು ಎಲ್ಲಾ ವರ್ಗದ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.