ತುಮಕೂರು: ಆರೋಗ್ಯದಿಂದ ಜೀವಿಸಬೇಕಾದರೆ ಆರೋಗ್ಯಕರ ಪರಿಸರವನ್ನು ನಿರ್ಮಿಸುವುದು ಕೂಡ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಅವರು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಶಾಂತಿನಗರದ ನ್ಯೂ ಕಾವೇರಿ ಸ್ಕೂಲ್ ಆವರಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ ನಮ್ಮ ವೈಯಕ್ತಿಕ ಆರೋಗ್ಯ ಕಾಳಜಿಯ ಜೊತೆಗೆ ಇತರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದಾಗ ಸಮುದಾಯದ ಆರೋಗ್ಯ ತನ್ನಿಂತಾನೆ ವೃದ್ಧಿಯಾಗುತ್ತದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ಸಮುದಾಯದ ಆರೋಗ್ಯ ಕಾಳಜಿಗಾಗಿಯೇ ವಾರ್ಷಿಕ ೧೦೦ ಕ್ಕೂ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಚಿಕಿತ್ಸೆಯನ್ನೂ ನೀಡುವ ಸೌಲಭ್ಯ ದೊರಕಿಸಿದ್ದೇವೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ್ ಮಾತನಾಡಿ ಸದಾ ಜನಪರ ಆರೋಗ್ಯ ಕಾಳಜಿ ಹೊಂದಿರುವ ಸಿದ್ಧಗಂಗಾ ಆಸ್ಪತ್ರೆ ತುಮಕೂರಿಗೆ ವಿಶ್ವದರ್ಜೆಯ ಸೌಲಭ್ಯ ದೊರಕಿಸುವಲ್ಲಿ ಯಶಸ್ವಿಯಾಗಿದ್ದು ಸಾರ್ವಜನಿಕರಿಗೆ ಆರೋಗ್ಯ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಶಾಂತಿನಗರ ಸುತ್ತಮುತ್ತಲಿನ ಸುಮಾರು ೨೦೦ ಕ್ಕೂ ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿ ೧೦೦ ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು.
ಕಮ್ಯುನಿಟಿ ಮೆಡಿಸಿನ್ ವೈದ್ಯರಾದ ಡಾ.ಶ್ವೇತ,ಡಾ.ಉಷಾರಾಣಿ,ಡಾ.ವಿದ್ಯಾ, ಪಿಆರ್ ಓ ಕಾಂತರಾಜು ಶಾಂತಿನಗರ ವಾರ್ಡ್ ಮುಖಂಡರು ಹಾಗೂ ಸಿದ್ಧಗಂಗಾ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.