ಪಾಳುಬಿದ್ದ ಕಟ್ಟಡಗಳು, ಬಣ್ಣಕಂಡು ದಶಕಗಳೇ ಕಳೆದಿರುವ ಗೋಡೆಗಳು, ಮುರಿದು ಹೋದ ಕಬ್ಬಿಣದ ಶೀಟ್ ಗಳು, ಸಾರ್ವಜನಿಕರಿಂದ ಹೊಡೆಯಲ್ಪಟ್ಟ ಶೌಚಾಲಯಗಳು, ಆವರಣದಲ್ಲೇ ಕಸ ತುಂಬಿದ ಗುಂಡಿಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಲ್ಲುಗಳು, ಎಲ್ಲಿ ನೋಡಿದರು ದೊಳೋದೂಳು ಇದೆಲ್ಲವೂ ನಗರದ ಶಕ್ತಿಕೇಂದ್ರ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗೆ ಕೂಗಳತೆ ದೂರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಬಾಗ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ ಅನಿರೀಕ್ಷಿತವಾಗಿ ಭೇಟಿನೀಡಿದಾಗ ಕಂಡುಬಂದ ಚಿತ್ರಣವಿದು.
ತುಮಕೂರು ನಗರದಲ್ಲಿ 1861ರಲ್ಲಿ ಆರಂಭವಾಗಿರುವ ಈ ಪುರಾತನ ಶಾಲೆಯಲ್ಲಿ ವಾರ್ಷಿಕ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದ ಕಾಲವೊಂದಿತ್ತು. ಆದರೆ ಸದ್ಯ ಈ ಶಾಲೆಯಲ್ಲಿ ಇಂದು ಕೇವಲ 48 ಮಕ್ಕಳು ಮಾತ್ರ ದಾಖಲಾಗಿರುವುದು ಅವಸಾನವನ್ನು ಸೂಚಿಸುತ್ತದೆ. ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವಿದ್ದು ಪಾರಂಪರಿಕ ತಾಣವಾಗಿ ಅಭಿವೃದ್ಧಿಗೊಳ್ಳಬೇಕಿದ್ದ ಈ ಶಾಲೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರುವುದು ವಿಪರ್ಯಾಸವೇ ಸರಿ.
ಶಾಲೆಗೆ ಪೂರ್ಣಪ್ರಮಾಣದ ಕಾಂಪೌಡ್ ಇಲ್ಲದ ಕಾರಣ ರಾತ್ರಿ ಇದು ಅನೈತಿಕ ತಾಣವಾಗಿದ್ದು ಬೆಳಗ್ಗೆ ಸ್ವಚ್ಛಗೊಳಿಸಲು ಕಸಿವಿಸಿಯಾಗುತ್ತದೆ, ಶಾಲೆಯ ಬಾಗಿಲು, ಕಿಟಕಿಗಳನ್ನು ಹೊಡೆಯುವುದು, ನೀರಿನ ಸಿಂಟೆಕ್ಸ್ ಹೊಡೆದುಹಾಕುವುದು, ನೀರಿನ ನಲ್ಲಿ ಮುರಿಯುವುದು ಹೀಗೆ ರಕ್ಷಣೆಯಿಲ್ಲದೆ ಸಮಸ್ಯೆಯಲ್ಲಿ ನಲುಗುತ್ತಿರುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ಸದಸ್ಯರ ಬಳಿ ತಮ್ಮ ಅಳಲು ತೋಡಿಕೊಂಡರು.
ಸದಸ್ಯರ ಭೇಟಿಯ ಮಾಹಿತಿ ಪಡೆದು ಸ್ಥಳಕ್ಕೆ ಬಂದ ತುಮಕೂರು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸೂರ್ಯಕಲಾ ರವರು ಶಾಲೆಯ ಮೂಲಭೂತ ಸೌಕರ್ಯ ಒದಗಿಸಲು ತಾವು ಮಾಡಿರುವ ಪ್ರಯತ್ನಗಳ ಬಗ್ಗೆ ಸದಸ್ಯರಿಗೆ ಮಾಹಿತಿನೀಡಿದರು. ಈ ಎಲ್ಲಾ ಅಂಶಗಳನ್ನು ಗಮನಿಸಿದ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ನಗರದ ಹೃದಯ ಭಾಗದಲ್ಲೇ ಇರುವ ಶತಮಾನಕಂಡ ಇಂತಹ ಶಾಲೆಯ ಬಗ್ಗೆ ತುಮಕೂರು ಜಿಲ್ಲಾಡಳಿತ ನಿರ್ಲಕ್ಷ ವಹಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಈ ಶಾಲೆಯ ಬಗ್ಗೆ ದೂರು ದಾಖಲಾಗಿದ್ದು ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಕಾನೂನು ಕೋಶದ ಅಧಿಕಾರಿಗಳಿಗೆ ಸೂಚಿಸಿದರು.