ತುಮಕೂರು:ರಾಜ್ಯ ಶಿಕ್ಷಣ ಕ್ಷೇತ್ರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳ ನಿವಾರಣೆಯ ನಿಟ್ಟಿನಲ್ಲಿ ಶಿಕ್ಷಕರಾಗಿ, ಶಿಕ್ಷಕರಿಗೋಸ್ಕರವೇ ಹಗಲಿರುಳು ದುಡಿಯುತ್ತಿರುವ ರೂಪ್ಸಾ ಕರ್ನಾಟಕ ರಾಜ್ಯಾಧ್ಯಕ್ಷರಾಗಿರುವ ಲೋಕೇಶ್ ತಾಳಿಕಟ್ಟೆ ಅವರು ಜೂನ್ 03ರಂದು ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ತುಮಕೂರು ಜಿಲ್ಲಾ ಖಾಸಗೀ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್.ಭೂತರಾಜು ತಿಳಿಸಿದ್ದಾರೆ.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿ,ಕಳೆದ 18 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕರು,ಅದರಲ್ಲಿಯೂ ಖಾಸಗಿ ಶಾಲೆಗಳ ಶಿಕ್ಷಕರು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.ನೆರೆಯ ರಾಜ್ಯಗಳಲ್ಲಿ ಇರುವಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಯೋಜನೆ ಜಾರಿಗೆ ತರುವಲ್ಲಿ ನಿರ್ಲಕ್ಷವಹಿಸಿದ್ದಾರೆ.ಈ ಬಾರಿ ಸ್ಪರ್ಧೆಗೆ ಬಂದಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್,ಮತದಾರರ ಬಳಿ ಹೋಗಿ ಮತ ಕೇಳದೆ,ಮತದಾರರೇ ಇವರ ಬಳಿ ಹೋಗಿ ನಾವು ಮತ ನೀಡುತ್ತೇವೆ ಎಂದು ಶಿಕ್ಷಕರೇ ದಂಬಾಲು ಬೀಳಬೇಕು ಎಂಬoತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳಾದ ಕಾಲ್ಪನಿಕ ವೇತನ, ಬಡ್ತಿ,ಶಿಕ್ಷಕರಿಗೆ ಆರೋಗ್ಯ ಸಂಜೀವಿನಿ ಜೀವ ವಿಮೆ ಸೇರಿದಂತೆ ಹಲವು ಸಮಸ್ಯೆಗಳಿವೆ.ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ವೈ.ಎ.ನಾರಾಯಣಸ್ವಾಮಿ ಸದನದಲ್ಲಿ ಒಂದು ದಿನವೂ ಈ ವಿಚಾರವನ್ನು ಮಾತನಾಡಿಲ್ಲ.ತಾಂತ್ರಿಕ ಕಾರಣ, ಇಲ್ಲವೇ ನವೀಕರಣಗೊಂಡಿಲ್ಲ ಎಂಬ ಕಾರಣ ನೀಡಿ ಸುಮಾರು 1500ಕ್ಕೂ ಹೆಚ್ಚು ಖಾಸಗಿ ಶಾಲೆಗಳನ್ನು ಸರಕಾರ ಮುಚ್ಚಲು ಮುಂದಾಗಿದ್ದರೂ ದ್ವನಿ ಎತ್ತಿಲ್ಲ.ನಮಗೆ ರಾಜಕಾರಣಿ ಬೇಡ,ಶಿಕ್ಷಕರ ಕೆಲಸ ಮಾಡುವ ಶಿಕ್ಷಕರು ಬೇಕು ಎಂಬ ಕೂಗ ಶಿಕ್ಷಕರಿಂದಲೇ ಬಂದಿದೆ. ಹಾಗಾಗಿ ರೂಪ್ಸಾ ಕರ್ನಾಟಕ ಲೋಕೇಶ್ ತಾಳಿಕಟ್ಟೆ ಅವರನ್ನು ಕಣಕ್ಕೆ ಇಳಿಸಿದೆ ಎಂದು ಭೂತರಾಜು ನುಡಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಮಾತನಾಡಿ,ಶಿಕ್ಷಕರ ಪರವಾಗಿ, ಶಿಕ್ಷಕರಿಗೋಸ್ಕರ ಪಕ್ಷೇತರ ಅಭ್ಯರ್ಥಿಯಾಗಿ ಮೇ.16 ರಂದು ನಾಮಪತ್ರ ಸಲ್ಲಿಸುತಿದ್ದೇನೆ.ಅಂದೇ 18 ವರ್ಷಗಳಿಂದ ಈ ಕ್ಷೇತ್ರದ ಸದಸ್ಯರಾಗಿ ರುವ ವೈ.ಎ.ನಾರಾಯಣಸ್ವಾಮಿ ಅವರು ಮಾಡಿರುವ ಕೆಲಸಗಳ ಪ್ರೋರ್ಗೆಸ್ ಕಾರ್ಡು ಬಿಡುಗಡೆ ಮಾಡಿ,ನಮ್ಮನ್ನು ಪ್ರತಿನಿಧಿಸಿದ ವ್ಯಕ್ತಿ ಹೇಗೆ ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂಬುದನ್ನು ಮತದಾರರ ಮುಂದಿಡುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಸುಮಾರು 3.75 ಲಕ್ಷ ಅತಿಥಿ ಉಪನ್ಯಾಸಕರಿದ್ದಾರೆ.ಕರ್ನಾಟಕವನ್ನು ಹೊರತು ಪಡಿಸಿ,ಉಳಿದ ಎಲ್ಲಾ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಸೆಮಿ ಎಡೆಡ್ ಶಿಕ್ಷಕರೆಂದು ಪರಿಗಣಿಸಿ, ಶಿಕ್ಷಣ ಸಂಸ್ಥೆಗಳು ಶೇ30ರ ವೇತನ ನೀಡಿದರೆ, ಉಳಿದ ಶೇ70ರಷ್ಟು ವೇತನವನ್ನು ಸರಕಾರವೇ ನೀಡುತ್ತಿದೆ.ಈ ವಿಷಯವನ್ನು ಒಂದು ದಿನವೂ ವಿಧಾನಪರಿಷತ್ತಿನಲ್ಲಿ ಮಾತನಾಡಿಲ್ಲ. ಇಂದಿಗೂ ಖಾಸಗಿ ಶಾಲೆಗಳ ಶಿಕ್ಷಕರು ಅರೆಹೊಟ್ಟೆಯಲ್ಲಿ ಬದುಕುತಿದ್ದಾರೆ.ಇವರಿಗೆ ನ್ಯಾಯದೊರಕಿಸುವುದು ನಮ್ಮ ಮೊದಲ ಅದ್ಯತೆಯಾಗಿದೆ.