ತುಮಕೂರು: ಸೇವೆ ಖಾಯಮಾತಿಗಾಗಿ ಮತ್ತು ಸೇವಾ ಭದ್ರತೆಗಾಗಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯು 26ನೇ ದಿನವೂ ಮುಂದುವರೆದಿದ್ದು, ಸರ್ಕಾರ ತಮ್ಮ ಸೇವೆ ಖಾಯಂಗೊಳಿಸುವAತೆ ಆಗ್ರಹಿಸಿ ತಮಟೆ ಚಳವಳಿ ನಡೆಸುವ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿ ಮುಂದುವರೆದಿದ್ದು ತಮಟೆ ಭಾರಿಸುವ ಮೂಲಕ ನಿದ್ದೆಯಲ್ಲಿರುವ ಸರ್ಕಾರವನ್ನು ಎಚ್ಚರಗೊಳಿಸುವ ಕೆಲಸವನ್ನು ಪ್ರತಿಭಟನಾಕಾರರು ಮಾಡಿದರು.
ಅತಿಥಿ ಉಪನ್ಯಾಸಕ ಡಾ. ವೆಂಕಟೇಶ್ ಮಾತನಾಡಿ, ಅತಿಥಿ ಉಪನ್ಯಾಸಕರು ಈ ರೀತಿ ಪ್ರತಿಭಟನಾ ಧರಣಿಗಳನ್ನು 20 ವರ್ಷಗಳಿಂದ ಮಾಡುತ್ತಾ ಬಂದರೂ ಸರ್ಕಾರ ಮಾತ್ರ ನಮಗೆ ನ್ಯಾಯ ದೊರಕಿಸುವ ಯಾವುದೇ ಚಿಂತನೆ ಮಾಡಿಲ್ಲ. ನಮ್ಮ ಜೀವನದ ಸ್ಥಿತಿಗಳು, ನಮ್ಮ ಸಮಸ್ಯೆಗಳು ಗಂಭೀರವಾಗಿದ್ದು, ಸರ್ಕಾರ ನಮ್ಮ ಜೀವನ ಸ್ಥಿತಿಗಳನ್ನು ಅರಿತುಕೊಂಡು ಸೇವೆ ಖಾಯಂ ಮಾಡಿದರೆ ಇರುವ ವರ್ಷಗಳಲ್ಲಿ ನೆಮ್ಮದಿಯಿಂದ ಬದುಕುತ್ತೇವೆ ಎಂದರು.
ಡಾ. ಹನುಮಂತರಾಯಪ್ಪ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಯನ್ನು ಏಕೆ ಜೀವಂತವಾಗಿ ಇರಿಸಿಕೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ. ಅತಿಥಿ ಉಪನ್ಯಾಸಕರಿಗೆ ಮಾತ್ರ 20 ದಶಕಗಳಿಂದ ಒಂದಲ್ಲ ಒಂದು ರೀತಿಯ ಶೋಷಣೆ, ದೌರ್ಜನ್ಯ, ಕಡಿಮೆ ವೇತನ, ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲದಿರುವುದು, ಈ ರೀತಿಯಾಗಿ ನಮ್ಮನ್ನು ಶೋಷಣೆ ಮಾಡುತ್ತಲೇ ಬಂದಿವೆ. ಆಧುನಿಕ ಜೀವನ ಪದ್ಧತಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಬದುಕುವುದು ಕಷ್ಟ ಸಾಧ್ಯವಾಗಿದೆ. ಸಿದ್ದರಾಮಯ್ಯನವರ ಸರ್ಕಾರ 12,500 ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭಾಗ್ಯ ನೀಡಬೇಕು ಎಂದರು