ಪ್ರಸಕ್ತ ಚುನಾವಣೆಯಲ್ಲಿ ರಾಜ್ಯದ ಜನತೆ ಬದಲಾವಣೆ ಬಯಸಿದ್ದು ಆಡಳಿತ ಪಕ್ಷ ಬಿಜೆಪಿ ವಿರೋಧಿ ಅಲೆ ಕಾಂಗ್ರೆಸ್ ಪರವಾಗಿ ಬೀಸಿರುವ ಹಿನ್ನೆಲೆಯಲ್ಲಿ ಈ ಸಲ ಕಾಂಗ್ರೆಸ್ ಆಡಳಿತ ನಡೆಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ, ಪ್ರಸಕ್ತ ಚುನಾವಣೆ ಅತ್ಯಂತ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪಕ್ಷದ ನಾಯಕರು, ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ರಾಜ್ಯದ ಜನರ ಆಶಾ ಭಾವನೆ ಅಭಿಪ್ರಾಯ ಕಾಂಗ್ರೆಸ್ ಪಕ್ಷದ ಪರವಾಗಿ ಕಂಡು ಬರುತ್ತಿದ್ದು, ಶೇ.೧೮ ರಿಂದ ೨೦ ರಷ್ಟು ಯುವ ಮತದಾರರು ಮತ್ತು ಅವರ ಚಿಂತನೆಗಳು ಕಾಂಗ್ರೆಸ್ ಪರವಾಗಿ ಗೋಚರಿಸಿದ್ದು, ರಾಜ್ಯದಲ್ಲಿ ಫಲಿತಾಂಶ ಚಿತ್ರಣ ಬದಲಾಗಲಿದೆ ಎಂದರು.
ರಾಜ್ಯದ ವಿವಿಧ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಬರುವುದಾಗಿ ತಿಳಿಸಿದ್ದು, ಪಕ್ಷದ ಆಂತರಿಕ ಸಮೀಕ್ಷೆಗಳು ಮತ್ತು ಕಾರ್ಯಕರ್ತರ ಅಭಿಪ್ರಾಯಗಳು ಪಕ್ಷದ ಪರವಾಗಿ ಕೇಳಿ ಬರುತ್ತಿದ್ದು, ೧೩೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ, ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ ಎಂದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಭರವಸೆಗಳು ಮತ್ತು ಐದು ಗ್ಯಾರಂಟಿಗಳ ಜಾರಿಗೆ ಅನುಮೋದನೆ ಪಡೆಯುವುದಾಗಿ ತಿಳಿಸಿದರು.