ತುಮಕೂರು : ರಾಜ್ಯದಲ್ಲಿನ ಪ್ರಸ್ತುತ ವಿದ್ಯಾಮಾನ್ಯಗಳು ಹಾಗೂ ಜನರು ಅನುಭವಿಸುತ್ತಿರುವ ಕಷ್ಟಗಳ ಕುರಿತಾಗಿ ಲೋಕ್ಶಕ್ತಿ ಪಾರ್ಟಿ ವತಿಯಿಂದ ಇಂದು ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದರು.ಲೋಕ್ಶಕ್ತಿ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗನಾಥ್ ಆರ್.ಎಸ್. ಮಾತನಾಡುತ್ತಾ ಪ್ರಸ್ತುತ ರಾಜಕಾರಣ ಎಂಬುದು ತುಘಲಕ್ ದರ್ಬಾರ್ ರೀತಿ ಆಗಿದೆ. ರಾಜ್ಯ ಸರ್ಕಾರ ಉಚಿತ ಭಾಗ್ಯಗಳನ್ನು (5 ಗ್ಯಾರಂಟಿಗಳನ್ನು) ನೀಡಿ ರಾಜ್ಯದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದೆ ಬೇಸಿಗೆ ಕಾಲ ಬರುವ ಮುಂಚಿತವಾಗಿಯೇ ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ, ಜೊತೆಗೆ ಇತ್ತೀಚಗೆ ಮೈಕ್ರೋ ಫೈನಾನ್ಸ್ಗಳಿಂದ ಕಿರುಕಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಇದ್ಯಾವುದರ ಬಗ್ಗೆ ಚಕಾರ ಎತ್ತದೇ ರಾಜ್ಯ ಸರ್ಕಾರ ಮಾತ್ರ ಮೌನ ವಹಿಸಿದೆ ಎಂದು ಆರೋಪಿಸಿದರಲ್ಲದೇ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ, ರಾಜ್ಯ ಹೆದ್ದಾರಿ ಜಿಲ್ಲಾ ಹೆದ್ದಾರಿಗಳು ಸಂಪೂರ್ಣ ಹಾಳಾಗಿವೆ ಯಾವುದೇ ಅಭಿವೃದ್ಧಿ ಕೆಲಸ ಕಾಮಗಾರಿಗಳಿಗೆ ಹಣ ನೀಡುವ ಸ್ಥಿತಿಯಲ್ಲಿ ಇಲ್ಲ. ಈ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ತನಗೆ ತಾನೇ ನಿರ್ಮಿಸಿಕೊಂಡಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು. ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷದಲ್ಲೂ ಭಿನ್ನಮತ, ಅದೇ ರೀತಿ ವಿರೋಧ ಪಕ್ಷದಲ್ಲೂ ಭಿನ್ನಮತ, ವಿರೋಧ ಪಕ್ಷ ಸರ್ಕಾರವನ್ನು ಕಿವಿ ಹಿಂಡುವ ಕೆಲಸ ಮಾಡುವ ಬದಲು ಮಂಡಿ ಊರಿ ಕುಳಿತಿದೆ. ಇವರಿಬ್ಬರೂ, ಒಬ್ಬರ ಮೇಲೆ ಮತ್ತೊಬ್ಬರು ಟೀಕೆ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ರೈತರ ಬಗ್ಗೆ, ಕೂಲಿ ಕಾರ್ಮಿಕರ ಬಗ್ಗೆ ಬಡವರ ಬಗ್ಗೆ ಇವರ್ಯಾರಿಗೂ ಕಾಳಜಿ ಇಲ್ಲ. ಬರೀ ಕುರ್ಚಿಗಾಗಿ ಕಾಳಗ ನಡೆಯುತ್ತಿದೆ ಎಂದು ಖಂಡಿಸಿದರು.



