ತುಮಕೂರು ನಗರದ ಜಯನಗರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ರಾಜ್ಯಾಧ್ಯಕ್ಷ ಸಾಧಿಕ್ ಪಾಷ ಅವರ ನೇತೃತ್ವದಲ್ಲಿ ಸಂಘಟನೆಯ ಹಲವು ಕಾರ್ಯಕರ್ತರು ಇಂದಿನಿoದ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಜಯನಗರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸಪ್ತಗಿರಿ ಬಡಾವಣೆಯ ಮಂಜೂರಾದ ಸಿ.ಎ ನಿವೇಶನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಈ ವೇಳೆ ಮಾತನಾಡಿದ ಮಾನವ ಹಕ್ಕುಗಳ ರಕ್ಷಣಾ ಕೇಂದ್ರದ ರಾಜ್ಯಾಧ್ಯಕ್ಷ ಸಾಧಿಕ್ ಪಾಷ,ತುಮಕೂರು ನಗರದ ಜಯನಗರ ಪೊಲೀಸ್ ಠಾಣೆ 2015ರಲ್ಲಿ ಜಯನಗರ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಉದ್ಘಾಟನೆಗೊಂಡಿದ್ದು, ಇದುವರೆಗೂ ಸ್ವಂತ ಕಟ್ಟಡವಿಲ್ಲ. ಇರುವ ಕಟ್ಟಡ ಶಿಥಿಲಗೊಂಡಿದ್ದು, ಸಣ್ಣ ಮಳೆ ಬಂದರೂ ನೀರು ಸೋರುವುದಲ್ಲದೆ, ಎಂದು ಕರ್ತವ್ಯ ನಿರತರ ಮೇಲೆ ಬೀಳುತ್ತದೆಯೋ ಎಂಬ ಜೀವಭಯದಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಟೂಡಾದಿಂದ ಮಂಜೂರಾಗಿರುವ ನಿವೇಶನದಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಸರಕಾರದ ಒಳಾಡಳಿತ ಇಲಾಖೆ ಮತ್ತು ಪೊಲೀಸ್ ಇಲಾಖೆಯ ವಸತಿಗೃಹ ಮತ್ತು ಮೂಲಭೂತ ಸೌಕರ್ಯ ವಿಭಾಗದಿಂದ ಅನುದಾನ ನೀಡಬೇಕಾಗಿದೆ ಎಂದರು.
ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿ ದೊಡ್ಡದಿದ್ದು, ಎಸ್.ಎಸ್.ಐಟಿಯಿಂದ ಬಡ್ಡಿಹಳ್ಳಿಯವರೆಗೆ ವಿಸ್ತರಿಸಿದೆ.ನಗರದ ಹೊರವಲಯವನ್ನೇ ಹೆಚ್ಚಾಗಿ ಹೊಂದಿದ್ದು, ಮನೆಗಳ್ಳತನ, ಸರಗಳ್ಳತನ ಪ್ರಕರಣಗಳು ಹೆಚ್ಚಾಗಿವೆ.ಹಾಲಿ ಇರುವ ಪೊಲೀಸ್ ಠಾಣೆಯನ್ನು ಅಂದು ಗೃಹ ಸಚಿವರಾಗಿದ್ದ,ಹಾಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಉದ್ಘಾಟಿಸಿದ್ದರು. ಟೂಡಾ ವತಿಯಿಂದ 2017ರಲ್ಲಿ ಸಪ್ತಗಿರಿ ಬಡಾವಣೆ ಗೆದ್ದಲಹಳ್ಳಿ ಗ್ರಾಮದ ಸರ್ವೆ ನಂಬರ್ 30/4 ಮತ್ತು 30/05ರಲ್ಲಿ ಸುಮಾರು 1196*116 ನಿವೇಶನ ಮಂಜೂರು ಮಾಡಿ 20 ಲಕ್ಷ ರೂ ಹಣವನ್ನು ಪಡೆದಿದೆ.ನಿವೇಶನ ಮಂಜೂರಾಗಿ ಸುಮಾರು 8 ವರ್ಷ ಕಳೆಯುತ್ತಾ ಬಂದಿದ್ದರೂ ಇದುವರೆಗೂ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಇದರಿಂದ ಸಿಬ್ಬಂದಿಗಳು ಶಿಥಿಲಗೊಂಡ ಕಟ್ಟಡದಲ್ಲಿಯೇ ಜೀವ ಭಯದಿಂದ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸರಕಾರ ಕನಿಷ್ಠ 50 ಲಕ್ಷ ರೂ ಅನುದಾನ ನೀಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕೆoಬುದು ನಮ್ಮ ಒತ್ತಾಯವಾಗಿದೆ ಎಂದು ಸಾಧಿಕ್ ಪಾಷ ತಿಳಿಸಿದರು.
ನಗರಾಭಿವೃದ್ದಿ ಪ್ರಾಧಿಕಾರ ಮಂಜೂರು ಮಾಡಿರುವ ನಿವೇಶನದಲ್ಲಿ ಜಯನಗರ ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಈಗಾಗಲೇ ಸರಕಾರದ ಮುಖ್ಯ ಕಾರ್ಯದರ್ಶಿಗಳು,ಗೃಹ ಸಚಿವರು, ಹಣಕಾಸು ಇಲಾಖೆ, ಒಳಾಡಳಿತ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಪೊಲೀಸ್ ಮಹಾನಿರ್ದೇಶಕರಿಗೆ 28-07-2023 ಮತ್ತು 22-08-2023ರಂದು ಪತ್ರ ಬರೆದು ಒತ್ತಾಯಿಸಿದ್ದರೂ ಇದುವರೆಗೂ ನಮ್ಮ ಪತ್ರಗಳಿಗೆ ಇಲಾಖೆಯಿಂದ ಯಾವುದೇ ಉತ್ತರ ಬಾರದ ಕಾರಣ, ಮಾನವ ಹಕ್ಕುಗಳ ರಕ್ಷಣಾ ಕೇಂದ್ರದಿoದ ಉದ್ದೇಶಿತ ನಿವೇಶನದಲ್ಲಿ ಸರಕಾರ ಪೊಲೀಸ್ ಠಾಣೆ ನಿರ್ಮಾಣಕ್ಕೆ ಅನುದಾನ ನೀಡುವವರೆಗೂ ಅಮರಣಾಂತ ಉಪವಾಸ ಆರಂಭಿಸಿದ್ದೇವೆ.ಕೂಡಲೇ ಪೊಲೀಸ್ ಇಲಾಖೆ ಅನುದಾನ ನೀಡಬೇಕು.ಇಲ್ಲದಿದ್ದರೆ ಹೋರಾಟ ಮುಂದುವರೆಯಲಿದೆ ಎಂದು ಸಾಧಿಕ್ ಪಾಷ ನುಡಿದರು.