ಕಾಂಗ್ರೆಸ್ ಪಕ್ಷ ಯಾವತ್ತು ಜಾತಿ ಜನಸಂಖ್ಯೆಯನ್ನು ನೋಡಿ ಅಧಿಕಾರ ನೀಡಿಲ್ಲ.ದೇವರಾಜ ಅರಸು, ಧರ್ಮಸಿಂಗ್,ವೀರಪ್ಪಮೊಹಿಲಿ ಅವರುಗಳೆಲ್ಲಾ ಯೋಗ್ಯತೆಯಿಂದ ಅಧಿಕಾರ ಪಡೆದವರೇ ಹೊರತು ಜಾತಿಯ ಬಲದಿಂದಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ-ತುಮಕೂರು ಜಿಲ್ಲೆ ಇವರು ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಕ್ಕೂಟದ ದಶಮಾನೋತ್ಸವ ಕಾರ್ಯಕ್ರಮ ಹಾಗೂ ಕೆ.ಎನ್.ಆರ್.ಪ್ರಶಸ್ತಿ ಪ್ರಧಾನ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕಾಂಗ್ರೆಸ್ಗೆ ದಲಿತರು,ಹಿಂದುಳಿದ ವರ್ಗದವರು,ಅಲ್ಪಸಂಖ್ಯಾತರು ಎಲ್ಲರಿಗೂ ರಾಜಕೀಯ ಅಧಿಕಾರವನ್ನು ನೀಡಿದೆ.ಆದರೆ ಬಿಜೆಪಿ, ಜೆಡಿಎಸ್ ಪಕ್ಷದಿಂದ ಇದು ಸಾಧ್ಯವೇ ಎಂದು ಪ್ರಶ್ನಿಸಿದರು.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗುವ ಸಮಯದಲ್ಲಿ ಅವರು ಜನಪ್ರತಿನಿಧಿಯಲ್ಲ.ಅಂದಿನ ಎಐಸಿಸಿ ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದ ಕೊಲ್ಲೂರು ಮಲ್ಲಪ್ಪ ಅವರ ಸಲಹೆಯಂತೆ ಶ್ರೀಮತಿ ಇಂದಿರಾಗಾoಧಿ ಅವರು ಅರಸು ಅವರನ್ನು ಮುಖ್ಯಮಂತ್ರಿ ಮಾಡಿದರು.ಆದರೆ ಅವರು ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ,ಜೀತ ವಿಮುಕ್ತಿ ಸೇರಿದಂತೆ ಹಲವಾರು ಯೋಜನೆಗಳು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಸರು ತಂದುಕೊಟ್ಟವು.ಹಾಗೆಯೇ ಬಂಗಾರಪ್ಪ ಅವರು ಸಹ ಜಾರಿಗೆ ತಂದ ವಿಶ್ವ,ಆರಾಧನಾ, ಆಶ್ರಯ, ಕನ್ನಡ ಮಾಧ್ಯಮ ಕೃಪಾಂಕ ಇವುಗಳು ಬಡವರ ಪರವಾಗಿ ಹೆಚ್ಚು ಜನಪ್ರಿಯತೆ ಪಡೆದವು.ಈ ಎಲ್ಲಾ ನಾಯಕರು ಜನರೊಂದಿಗೆ ಬೆರತು ಕೆಲಸ ಮಾಡಿದರು.ಜನರಿಂದ ಅಂತರ ಕಾಯ್ದು ಕೊಳ್ಳಲಿಲ್ಲ. ಜನರಿಂದ ದೂರ ಇದ್ದವ ಜನನಾಯಕನಾಗಲು ಸಾಧ್ಯವೇ ಇಲ್ಲ ಎಂದು ಕೆ.ಎನ್.ರಾಜಣ್ಣ ನುಡಿದರು.