ತುಮಕೂರು:ಲೋಕ ಕಲ್ಯಾಣಕ್ಕಾಗಿ ಕೆರೆ,ಕಟ್ಟೆಗಳನ್ನು ಕಟ್ಟಿದ ಶ್ರೀಸಿದ್ದರಾಮೇಶ್ವರರ ನಿಜ ಅರ್ಥದಲ್ಲಿ ಕರ್ಮಯೋಗಿ, ಜ್ಞಾನಯೋಗಿ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ,ಮಹಾನಗರ ಪಾಲಿಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಬೋವಿ ಸಮಾಜ, ರಾಷ್ಟ್ರೀಯ ಓಸಿಸಿಐ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ನಿಜ ಶರಣ ಶ್ರೀಸಿದ್ದರಾಮೇಶ್ವರರ ೮೫೧ನೇ ಜನ್ಮ ಜಯಂತಿ ಕಾರ್ಯಕ್ರಮಕ್ಕೆ ಶ್ರೀಗುರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿ ಮಾತನಾಡುತಿದ್ದ ಅವರು,ಜನರ ಅವಶ್ಯಕತೆಗಳನ್ನು ತಿಳಿದು,ಸಕಲ ಜೀವರಾಶಿಗಳಿಗೂ ಅತಿ ಅಗತ್ಯವೆನಿಸುವ ಜೀವ ಜಲವನ್ನು ಸಂಗ್ರಹಿ ಸಲು,ಆಮೂಲಕ ಕೃಷಿ,ತೋಟಗಾರಿಕೆ,ಪಶು ಸಂಗೋಪನೆ ಸೇರಿದಂತೆ ಎಲ್ಲಾ ಕಾಯಕಗಳಿಗೆ ಬಳಕೆ ಮಾಡುವ ಉದ್ದೇಶ ದಿಂದ ನಾಡಿನಾದ್ಯಂತ ಸಾವಿರಾರು ಕೆರೆ ಕಟ್ಟೆಗಳನ್ನು ಕಟ್ಟಿದ ಮಹಾನ್ ಪುರುಷ ಶ್ರೀಸಿದ್ದರಾಮೇಶ್ವರರ ಜಯಂತಿಯನ್ನು ಸರಕಾರವೇ ಆಚರಿಸುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ವೈಜ್ಞಾನಿಕತೆಗೆ ಮನುಷ್ಯ ತೆರೆದುಕೊಳ್ಳುವ ಮೊದಲೇ ಶ್ರೀಶಿವಯೋಗಿ ಸಿದ್ದರಾಮೇಶ್ವರರ ನಿರ್ಮಿಸಿದ ಅನೇಕ ಕೆರೆ ಕಟ್ಟೆಗಳು ಇಂದಿನ ತಂತ್ರಜ್ಞಾನಕ್ಕೆ ಸವಾಲಾಗಿ ನಿಂತಿವೆ.ಸರ್ವರಿಗೂ ಸಮಪಾಲು ಎಂಬoತೆ ತಾವು ಕಟ್ಟಿದ ಕೆರೆ ಕಟ್ಟೆಗಳಲ್ಲಿ ಎಲ್ಲ ವರ್ಗದವರು ನೀರನ್ನು ಸಮಪಾಲು ಪಡೆಯುವಂತಹ ವ್ಯವಸ್ಥೆಯನ್ನು ಕಲ್ಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಮಾನವ ಕಲ್ಯಾಣ ಮತ್ತು ಅಭಿವೃದ್ದಿ ಅವರ ಮೂಲ ಉದ್ದೇಶವಾಗಿತ್ತು.ಅಲ್ಲಮ ಪ್ರಭು,ಚನ್ನ ಬಸವಣ್ಣನ ನಂತರ ಶೂನ್ಯ ಸಿಂಹಾಸನ ಏರಿದ ಸೊನ್ನಲಿಗೆ ಸಿದ್ದರಾಮೇಶ್ವರರು,ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಕಾಯಕ ಯೋಗಿಗಳ ಪ್ರತಿನಿಧಿ ಯಾಗಿ ಕಲ್ಯಾಣದ ಕ್ರಾಂತಿಯಲ್ಲಿ ಕಾಣುತ್ತಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.