ಬೆಂಬಲ ಬೆಲೆ ಜಾರಿಗೆ ಬರಬೇಕಾದರೆ ಖರೀದಿ ಕೇಂದ್ರಗಳನ್ನು ವ್ಯಾಪಕವಾಗಿ ತೆರೆಯಬೇಕು. ಸಮರ್ಪಕ ಖರೀದಿ ಕೇಂದ್ರಗಳು ಇಲ್ಲದೇ ಇದ್ದರೆ ಬೆಂಬಲ ಬೆಲೆ ಕೇವಲ ಕಾಗದದಲ್ಲಿ ಮಾತ್ರ ಉಳಿಯುತ್ತದೆ ಅದ್ದರಿಂದ ವ್ಯಾಪಕವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಸಂಘವು ಆಗ್ರಹಿಸುತ್ತದೆ.
ಒಂದೆಡೆ ಸರಿಯಾಗಿ ಮಳೆ ಇಲ್ಲದೆ, ಮತ್ತೊಂದೆಡೆ ವಿಪರೀತ ಹೆಚ್ಚಳವಾಗಿರುವ ಉತ್ಪಾದನಾ ವೆಚ್ಚವನ್ನು ನಿಭಾಯಿಸಿ ತೆಂಗುಬೆಳೆ ರೈತನ ಕೈಗೆ ಫಸಲಾಗಿ ಸಿಗಲು ಕನಿಷ್ಟ ೧೦ ವರ್ಷಗಳು ಬೇಕು. ನುಸಿ ಪೀಡೆ, ಬರಗಾಲ-ಅಂತರ್ಜಲ ಮಟ್ಟ ಕುಸಿತ ಮುಂತಾದ ಹಲವಾರು ಸವಾಲುಗಳ ನಡುವೆಯೂ ದೇಶದಲ್ಲೇ ತೆಂಗು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ಈಗ ಕಲ್ಪವೃಕ್ಷ ಮತ್ತು ಕಲ್ಪತರುನಾಡು ಎಂದು ಹೆಸರಾಗಿರುವ ತೆಂಗು ಇಂದು ರೈತರ ಪಾಲಿಗೆ ಕಲ್ಪವೃಕ್ಷವಾಗಿ ಉಳಿದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಏPಖS) ವಿಶ್ಲೇಷಿಸಿದೆ.
ತೆಂಗು ರೈತರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡಿ ಕೃಷಿ ತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇಕಡಾ ೫೦ ರಷ್ಟು ಲಾಭಾಂಶವನ್ನು ಸೇರಿಸಿ ಬೆಲೆ ನಿಗದಿ ಮಾಡಿ ಖರೀದಿ ಮಾಡಬೇಕು. ಇದರ ಜೊತೆಗೆ ತೆಂಗು ಬೆಳೆಗಾರರ ಇತರೆ ಸಮಸ್ಯೆಗಳಾದ ಜಾಗತೀಕ ತಾಪಮಾನದ ವೈಪರಿತ್ಯದಿಂದ ಬೆಳೆಕುಸಿತ, ರೋಗ ಬಾದೆ, ನೀರಾವರಿ ಪಂಪ್ ಸೆಟ್ಗಳಿಗೆ ಮೀಟರ್ ಅಳವಡಿಕೆಯಂತಹ ನೀತಿಗಳು ಈಗಾಗಲೇ ಸಂಕಷ್ಟದಲ್ಲಿರುವ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತದೆ.
ಈ ಹಿನ್ನಲೆಯಲ್ಲಿ ತೆಂಗುಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ರಾಜ್ಯ ಬಜೆಟ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ತೆಂಗು ಬೆಳೆಗಾರರ ವಿಧಾನ ಸೌಧ ಚಲೋವನ್ನು ತೆಂಗು ಬೆಳೆಗಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ದಿನಾಂಕ ೧೯, ಬುಧವಾರ ಜುಲೈ ೨೦೨೩ ಬೆಂಗಳೂರಿನಲ್ಲಿ ವಿಧಾನ ಸೌಧ ಚಲೋ ಹಮ್ಮಿಕೊಳ್ಳಲಾಗಿದೆ .
ಈ ಹೋರಾಟಕ್ಕೆ ರಾಜ್ಯದ ತೆಂಗು ಬೆಳೆಗಾರರು ಪಕ್ಷಾತೀತವಾಗಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (ಏPಖS) ಕರ್ನಾಟಕ ರಾಜ್ಯ ಸಮಿತಿ ಹಾಗು ತುಮಕೂರು ಜಿಲ್ಲಾ ಸಮಿತಿಗಳು ಮನವಿ ಮಾಡಿಕೊಳ್ಳುತ್ತಿವೆ.
ಕೂಡಲೇ ಕೇಂದ್ರ ಸರ್ಕಾರ ರೈತ ವಿರೋಧಿ ಆಮದು ನೀತಿಯನ್ನು ಕೈಬಿಡಬೇಕು. ರಾಜ್ಯ ತೋಟಾಗಾರಿಕೆ ಇಲಾಖೆ ಶಿಪಾರಸ್ಸಿನಂತೆ ಒಂದು ಕ್ವಿಂಟಾಲ್ ಉಂಡೆ ಕೊಬ್ಬರಿಗೆ ಉತ್ಪಾದನಾ ವೆಚ್ಚ ೧೬,೭೩೦ ರೂ ಅನ್ನು ಬೆಂಬಲ ಬೆಲೆಯಾಗಿ ನಿಗದಿ ಮಾಡಿರುವದನ್ನನಾದರೂ ನೀಡಬೇಕು. ಅಲ್ಲಿಯ ತನಕ ರಾಜ್ಯ ಸರ್ಕಾರ ರೈತರ ರಕ್ಷಣೆಗಾಗಿ ಕನಿಷ್ಠ ಐದು ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಬೇಕು, ತೆಂಗು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳೆ ಪ್ರದೇಶದ ರೈತ ಸಂಘಟನೆಗಳ ಮುಖಂಡರು, ಶಾಸಕರು, ಸಂಸದರ ನಿಯೋಗವನ್ನು ಪ್ರಧಾನಿಗಳ ಬಳಿಗೆ ಕರೆದೊಯ್ಯಬೇಕು, ತೆಂಗು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಾಣಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತೆಂಗುಬೆಳೆಗಾರರ ಸಭೆ ನಡೆಸಬೇಕೆಂದು ವಿಧಾನಸೌಧ ಚಲೋ ದಲ್ಲಿ ಆಗ್ರಹಿಸುತ್ತೇವೆ. ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಹಣಕಾಸು ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್, ಜಿಲ್ಲಾಧ್ಯಕ್ಷ ಚೆನ್ನಬಸವಣ್ಣ ಆರ್.ಎಸ್. ಜಿಲ್ಲಾಕಾರ್ಯದರ್ಶಿ ಅಜ್ಜಪ್ಪ ಜಿಲ್ಲಾ ಉಪಾಧ್ಯಕ್ಷ ರುಗಳಾದ ದೊಡ್ಡನಂಜಪ್ಪ, ಬಿ.ಉಮೇಶ್, ಎನ್.ಕೆ. ಸುಬ್ರಮಣ್ಯ, ಮಲ್ಲಿಕಾರ್ಜುಪ್ಪ ಮತ್ತು ಟಿ.ಎಸ್.ರಂಗಪ್ಪ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.