ತುಮಕೂರು,ನ.21- ರಾಮನಗರ ಮತ್ತು ಮಾಗಡಿಗೆ ಹೇಮಾವತಿ ನೀರು ಸರಬರಾಜು ಮಾಡಲು ಉದ್ದೇಶಿಸಿರುವ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಹೇಮಾವತಿ ನೀರಾವರಿ ಹೋರಾಟ ಸಮಿತಿ ವತಿಯಿಂದ ಡಿ. 4 ರಿಂದ 6ರವರೆಗೆ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು. ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಪಾದಯಾತ್ರೆಯಲ್ಲಿ ಪಕ್ಷಾತೀತವಾಗಿ ಎಲ್ಲಾ ಪಕ್ಷಗಳ ನಾಯಕರು ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಸಾರ್ವಜನಿಕರು, ಸ್ವಯಂ ಪ್ರೇರಿತವಾಗಿ ಭಾಗವಹಿಸಲಿದ್ದು, ಇದನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ವಿವಿಧ ಪಕ್ಷಗಳ ಮುಖಂಡರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಖುದ್ದು ಭೇಟಿ ಯಾಗಿದ್ದು, ಕೆಲವರನ್ನು ಫೋನ್ ಮೂಲಕ ಸಂಪರ್ಕಿಸಿದ್ದು ಅವರೆಲ್ಲರು ಪಾದಯಾತ್ರೆಯಲ್ಲಿ ಭಾಗವಹಿಸಲು ಒಪ್ಪಿಗೆ ನೀಡಿದ್ದಾರೆ ಎಂದರು. ಜಿಲ್ಲೆಗೆ ನಿಗಧಿಯಾಗಿರುವ ಹೇಮಾವತಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ನಮ್ಮ ಜಿಲ್ಲೆಯ ಪಾಲಿನ ನೀರನ್ನು ಹರಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹುನ್ನಾರ ನಡೆಸಿದ್ದು, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಹೇಮಾವತಿ ನಾಲಾ ವಲಯ, ಅಧಿಕಾರಿಗಳನ್ನು ಬೆದರಿಸುವ ಮೂಲಕ ಕಾಮಗಾರಿ ಆರಂಭಿಸಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.