ತುಮಕೂರು:ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗಧಿ,ತೆಂಗು ಮತ್ತು ಅದರ ಉಪ ಉತ್ಪನ್ನಗಳ ಮಾರುಕಟ್ಟೆಗೆ ಪ್ರೋತ್ಸಾಹ, ಸರಕಾರಿ ಹಾಸ್ಟಲ್, ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆ ಬಳಕೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ(ರಿ) ವತಿಯಿಂದ ಇಂದು ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟ ಭಾರತೀಯ ಕಿಸಾನ್ ಸಂಘದ ಪಾದಯಾತ್ರೆ, ಬಿ.ಹೆಚ್.ರಸ್ತೆ ಮೂಲಕ ಟೌನಹಾಲ್ ತಲುಪಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದರು.ನಂತರ ಅಶೋಕ ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈತರ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಬೆಳ್ಳಾವೆ ಶ್ರೀಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಸ್ವಾಮಿಜೀ, ಕೊಬ್ಬರಿ ತುಮಕೂರು ಸೇರಿದಂತೆ ಮಧ್ಯ ಕರ್ನಾಟಕದ ಸುಮಾರು ೧೨ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ, ಕಳೆದ ವರ್ಷ ಕ್ವಿಂಟಾಲ್ಗೆ ೧೮ ಸಾವಿರ ಇದ್ದ ಬೆಲೆ,ಈ ವರ್ಷ ೮ ಸಾವಿರಕ್ಕೆ ಕುಸಿದಿದೆ.ಸರಕಾರ ನೀಡುತ್ತಿರುವ ೧೧,೭೩೦ ರೂ ಬೆಂಬಲ ಬೆಲೆ ಯಾವುದಕ್ಕೂ ಸಾಲದಾಗಿದೆ.ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.ಸರಕಾರ ಕೂಡಲೇ ಕೊಬ್ಬರಿ ಬೆಲೆಯನ್ನು ಹೆಚ್ಚಿಸಬೇಕು.ಹಾಗೆಯೇ ಸರಕಾರ ನಡೆಸುವ ಹಾಸ್ಟಲ್ಗಳು,ಮದ್ಯಾಹ್ನದ ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸುವ ಮೂಲಕ ಕೊಬ್ಬರಿಗೆ ಪ್ರೋತ್ಸಾಹ ನೀಡಬೇಕು.ಅಡುಗೆಗೆ ಕಲಬರಕೆ ಎಣ್ಣೆ ಬಳಸುವ ಬದಲು ನೈಸರ್ಗಿಕ ವಿಧಾನದಿಂದ ತೆಗೆದ ಕೊಬ್ಬರಿ ಎಣ್ಣೆ ಬಳಕೆ ಮಾಡುವುದರಿಂದ ರೈತರಿಗೂ ಉತ್ತಮ ಬೆಲೆ ಸಿಗಲಿದೆ.ಅಲ್ಲದೆ ಜನರನ್ನು ಸಹ ರೋಗದಿಂದ ಮುಕ್ತಗೊಳಿ ಸಬಹುದು. ಈ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿ,ಸರಕಾರವೇ ನಿಗಧಿ ಪಡಿಸಿದ ಕೃಷಿ ಬೆಲೆ ಆಯೋಗ ಕ್ವಿಂಟಾಲ್ ಕೊಬ್ಬರಿಗೆ ೧೬,೭೫೦ ರೂ ಖರ್ಚಾಗುತ್ತದೆ ಎಂದು ವರದಿ ನೀಡಿದ್ದರೂ ಸರಕಾರ ನೀಡುತ್ತಿರುವ ಬೆಂಬಲ ಬೆಲೆ ಅದಕ್ಕಿಂತಲೂ ಕಡಿಮೆ ಇದೆ.ಹಾಗಾಗಿ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ.ಅಲ್ಲದೆ ಕೂಡಲೇ ಕೊಬ್ಬರಿಗೆ ಖರೀದಿ ಕೇಂದ್ರಗಳನ್ನು ತೆರೆದು, ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಆರಂಭಿಸಿದರೆ ಹೆಚ್ಚಿನ ಅನುಕೂಲ ರೈತರಿಗೆ ಆಗಲಿದೆ.ತೆಂಗಿನಿAದ ಉತ್ಪನ್ನವಾಗುವ ನೀರಾ ಹಾಗೂ ಇತರೆ ವಸ್ತುಗಳನ್ನು ಅಬಕಾರಿ ಕಾಯ್ದೆಯಿಂದ ಹೊರಗಿಟ್ಟು, ಪಡಿತರ ಅಂಗಡಿಗಳ ಮೂಲಕ ಜನರಿಗೆ ಕೊಬ್ಬರಿ ಉತ್ಪನ್ನಗಳನ್ನು ವಿತರಿಸುವಂತೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ ವಾಗಲಿದೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಭಾರತೀಯ ಕಿಸಾನ್ ಸಭಾದ ರೈತರನ್ನು ಉದ್ದೇಶಿಸಿ ಮಾತನಾಡಿದ ಗುಬ್ಬಿ ತಾಲೂಕು ಗೊಲ್ಲಹಳ್ಳಿಯ ಶ್ರೀಸಿದ್ದಲಿಂಗೇಶ ಮಹಾಸಂಸ್ಥಾನದ ಶ್ರೀವಿಭವ ವಿದ್ಯಾ ದೇಶಿಕೇಂದ್ರ ಸ್ವಾಮೀಜಿಗಳು,ಭಾರತೀಯ ಸಮಾಜದಲ್ಲಿ ಕೃಷಿ ಮತ್ತು ಋಷಿ ಪರಂಪರೆ ಉತ್ಕೃಷ್ಟವಾದವು.ಭಾರತದ ಬೆಳವಣಿಗೆಯಲ್ಲಿ ಕೃಷಿಕರ ಪಾತ್ರ ಬಹಳ ದೊಡ್ಡದಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯುವಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ರೈತರ ನೆರವಿಗೆ ಬರಬೇಕು. ಕೊಬ್ಬರಿ ಎಣ್ಣೆ ಮನುಷ್ಯನಿಗೆ ಅತ್ಯಂತ ಅವಶ್ಯಕವಾದ ವಸ್ತುವಾಗಿದೆ.ಇದರ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ಬದಿಗಿಟ್ಟು, ಎಲ್ಲರೂ ಕೊಬ್ಬರಿ ಬಳಸುವಂತೆ ಪ್ರೋತ್ಸಾಹಿಸಬೇಕು ಎಂದರು