ನಮ್ಮ ಕನ್ನಡ ಶಾಲೆ ಉಳಿಸಿ-ಬೆಳಸಿ ಬೆಳಗಾವಿ ಚಲೋಗೆ ರುಪ್ಸ ಕರ್ನಾಟಕ ಸಂಘಟನೆ ಭಾಗವಹಿಸಲು ನಿರ್ಧಾರ.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಕನ್ನಡ ಶಾಲೆ ಉಳಿಸುವ ಕುರಿತು ಗಮನ ಸೆಳೆಯಲು ಹಾಗೂ 29 ವರ್ಷಗಳಿಂದ ಸಂಬಳ ಇಲ್ಲದೆ ದುಡಿಯುತ್ತಿರುವ ಶಿಕ್ಷಕರ ಉಳಿಯುವಿಕೆಗಾಗಿ ದಿನಾಂಕ 12.12.2023 ರಂದು ಬೆಳಗಾವಿ ಸುವರ್ಣಸೌಧದ ಎದುರು ಪ್ರತಿಭಟನೆ ನಡೆಸಲು ರುಪ್ಸ ಕರ್ನಾಟಕ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜು ಆಡಳಿತ ಮಂಡಳಿಗಳು ಹಾಗೂ ನೌಕರರ ಸಂಘಟನೆ ಜಂಟಿಯಾಗಿ ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟನೆಗೆ ಕರೆ ನೀಡಲಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ಅನುದಾನ ಬಯಸುವ ಸ್ಥಳೀಯ ಮಾಧ್ಯಮ ಶಾಲೆಗಳಿಗೆ ತಕ್ಷಣ ಅನುದಾನ ನೀಡಲು ಆಯಾ ಸರ್ಕಾರಗಳು ಮುಂದಾಗುತ್ತವೆ. ಕಾರಣ ಆಯಾ ರಾಜ್ಯದ ಭಾಷಾ ರಕ್ಷಣೆ ಪ್ರಮುಖವಾಗಿ ಪರಿಗಣಿಸುವ ಸಂದರ್ಭದಲ್ಲಿ ನಮ್ಮ ರಾಜ್ಯ ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್ ಗೆ ಪ್ರಧಾನ್ಯತೆ ಕೊಡುತ್ತಿರುವುದು ದುರಂತವೇ ಸರಿ. ಶಾಸಕರಿಗೆ ಸಂಧಿ ಸಮಾಸ ಹೇಳಿಕೊಡುವಷ್ಟು ಕನ್ನಡದ ಅಭಿಮಾನಿ ಮುಖ್ಯ ಮಂತ್ರಿಗಳು ಅಧಿಕಾರ ಸ್ವೀಕರಿಸಿ ಸುಮಾರು 6 ತಿಂಗಳಲ್ಲಿ ನೂರಾರು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಿವೆ. ಇನ್ನು ಅನುದಾನಿತ ಕನ್ನಡ ಶಾಲೆಗಳಲ್ಲಿ ಸಾವಿರಾರು ಶಿಕ್ಷಕರ ಕೊರತೆ ಇದೆ. ಅಲ್ಲಿಯ ಬಡ ಮಕ್ಕಳಿಗೆ ಶಿಕ್ಷಣ ನೀಡುವರು ಯಾರು?.
ಖಾಸಗಿ ಅನುದಾನ ರಹಿತ ಬಜಟ್ ಶಾಲೆಗಳ ಪರಿಸ್ಥಿತಿ ಕುರಿತು ಹಲವು ಬಾರಿ ವಿನಂತಿಸಿ ಕೊಂಡರೂ ನಮ್ಮ ಶಿಕ್ಷಣ ಮಂತ್ರಿಗಳಿಗೆ ಕೇಳಿಸುತ್ತಿಲ್ಲ. ಬಡ ಮಕ್ಕಳ ಶಿಕ್ಷಣದ ಉಸಿರಾದ RTE ಮರು ಅನುಷ್ಠಾನದ ಆಸೆ ಹಾಗೇ ಉಳಿದಿದೆ.
ಈ ಎಲ್ಲಾ ಕಾರಣಗಳಿಗಾಗಿ ನಮ್ಮ ಸಂಘಟನೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಂಡಿದೆ.
ದಯಮಾಡಿ ಈ ಕುರಿತು ಸಾರ್ವಜನಿಕ ಗಮನಕ್ಕೆ ತರಲು ಪ್ರಕಟಿಸಬೇಕೆಂದು ಕೋರುತ್ತೇವೆ.