ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದಲ್ಲಿಯೇ ನಡೆದ ರಮಾಬಾಯಿ ಅಂಬೇಡ್ಕರ್ ಅವರ 126ನೇ ವರ್ಷದ ಜನ್ಮದಿನಾಚರಣೆಯನ್ನು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಪದಾಧಿಕಾರಿಗಳು ಆಚರಿಸಿದರು.
ನಗರದ ಗಾಜಿನ ಮನೆಯಲ್ಲಿ ನಡೆದ ರಮಾಬಾಯಿ ಜನ್ಮಜಯಂತಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ ವಿವಾಹದ ನಂತರ 1907ರಲ್ಲಿ ಭೀಮರಾವ್ ಅಂಬೇಡ್ಕರರ ಮೆಟ್ರಿಕ್ಯುಲೇಷನ್ ಪರೀಕ್ಷೆ ಪೂರ್ಣಗೊಂಡಿತು. ಪ್ರತಿ ತಿಂಗಳು 25 ರೂ. ವಿದ್ಯಾರ್ಥಿ ವೇತನದ ಮೂಲಕ 1912ರಲ್ಲಿ ಅವರು ಬಿ.ಎ. ಪರೀಕ್ಷೆಯಲ್ಲಿ ಕೂಡ ತೇರ್ಗಡೆ ಹೊಂದಿದರು. ಈ ಸಂದರ್ಭದಲ್ಲಿ ಅಂಬೇಡ್ಕರರ ಶಿಕ್ಷಣಕ್ಕೆ ಅವರ ತಂದೆ ರಾಮ್ ಜಿ ಸಕ್ಪಾಲ್ರಷ್ಟೆ ಜೊತೆಜೊತೆಯಾಗಿ ನಿಂತದ್ದು ರಮಾಬಾಯಿಯವರು ಎಂದು ಹೇಳಿದರು.
ಪತಿಯ ಶಿಕ್ಷಣದ ಅಗಾಧ ಹಂಬಲ ಅರಿತಿದ್ದ ರಮಾಬಾಯಿಯವರು ಅಮೆರಿಕಕ್ಕೆ ಅಂಬೇಡ್ಕರರನ್ನು ಭರವಸೆಯೊಡನೆ ಬೀಳ್ಕೊಡುತ್ತಾರೆ. ಈ ಸಮಯದಲ್ಲಿ ಬಹಳ ದೃಢ ಚಿತ್ತದಿಂದ ತನ್ನ ಸಹೋದರ ಶಂಕರ ಧಾತ್ರೆ ಮತ್ತು ಅತ್ತೆ ಮೀರಾ ರವರ ನೆರವಿನ ಮೂಲಕ ಸಂಸಾರದ ಹೊಣೆ ಹೊತ್ತುಕೊಳ್ಳುವ ಅವರು, ಅವರಿಬ್ಬರು ತರುತ್ತಿದ್ದ ನಿತ್ಯದ ಕೂಲಿ ಹಣದಲ್ಲೇ ಕುಟುಂಬವನ್ನು ಮುನ್ನಡೆಸುತ್ತಾರೆ ಎಂದು ಅಂಬೇಡ್ಕರ್ ಉಲ್ಲೇಖಿಸಿದ್ದಾರೆ ಎಂದರು.
ಯಶಸ್ವಿ ಗಂಡಿನ ಹಿಂದೆ ಮಹಿಳೆ ಇರುತ್ತಾರೆ ಎನ್ನುವುದಕ್ಕೆ ರಮಾಬಾಯಿ ಉತ್ತಮ ಉದಾಹರಣೆ, ಕುಟುಂಬದ ಜವಾಬ್ದಾರಿಯನ್ನು ಹೊತ್ತು, ಪತಿಯ ಶಿಕ್ಷಣ ಪ್ರೀತಿಗೆ ಆರೈಕೆ ಮಾಡಿದರ ಫಲವಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವಜ್ಞಾನಿಯಾದರೂ, ಸಾಮಾಜಿಕ ಹೋರಾಟದ ಮೂಲಕ ದೇಶದ ಲಕ್ಷಾಂತರ ಶೋಷಿತರಿಗೆ ಬೆಳಕನ್ನು ನೀಡಿದರು ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ಇಂದ್ರಕುಮಾರ್ ಡಿ.ಕೆ, ಸಂಘಟನಾ ಕಾರ್ಯದರ್ಶಿ ನಾಗರಾಜು ದಿಬ್ಬೂರು, ಯುವ ಘಟಕದ ಕಾರ್ಯಾಧ್ಯಕ್ಷ ನಾರಾಯಣ್.ಎಸ್., ಸುರೇಶ್ ಕುಮಾರ್, ನಿತಿನ್, ಗಿರೀಶ್, ಶಿವರಾಜು, ಗಂಗಾಧರ್, ಶಿವಣ್ಣ ಕೊತ್ತಿಹಳ್ಳಿ ಸೇರಿದಂತೆ ಇತರರು ರಮಾಬಾಯಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ರಮಾಬಾಯಿ ಅಂಬೇಡ್ಕರ್ ಜನ್ಮಜಯಂತಿ ಆಚರಣೆ
Leave a comment
Leave a comment